ಮಧುಗಿರಿ: ಪಟ್ಟಣದ ಕಾರ್ಯಪ್ಪ ಬಡಾವಣೆಯಲ್ಲಿ ಮಂಗವೊಂದು ಮೂರಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದ್ದು, ಹಲವರನ್ನು ಅಟ್ಟಾಡಿಸಿಕೊಂಡು ದಾಳಿ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಪಟ್ಟಣದ ಲಿಂಗೇನಹಳ್ಳಿಯ ಪೂರ್ಣಿಮಾ ಮತ್ತು ನವೀನ್ ದಂಪತಿಯ 2 ವರ್ಷದ ಬಾಲಕಿ ಲಿಶಿಕಾ, ಕಾರ್ಯಪ್ಪ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದ ನಿವಾಸಿ ಜಯಮ್ಮ (68) ಮತ್ತು ಒಂದು ವರ್ಷದ ಮಗು ಅಫಾನ್ ಮಂಗನಿಂದ ಕಡಿತಕ್ಕೊಳಗಾದವರು.
ದೇವಸ್ಥಾನದ ಸಮೀಪ ಮನೆಯ ಮುಂದೆ ಕುಳಿತಿದ್ದ ಜಯಮ್ಮ ಮತ್ತು ಮನೆಯ ಮುಂಭಾಗ ಜೋಲಿಯಲ್ಲಿ ಮಲಗಿದ್ದ ಒಂದು ವರ್ಷದ ಮಗು ಅಫಾನ್ ಇಬ್ಬರಿಗೂ ಏಕ ಕಾಲದಲ್ಲಿ ಕೋತಿಯು ದಾಳಿ ನಡೆಸಿದೆ, ಇಬ್ಬರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತದ ನಂತರ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಅಜ್ಜ- ಅಜ್ಜಿಯ ಮನೆಗೆ ಬಂದಿದ್ದ 2 ವರ್ಷದ ಲಿಶಿಕಾ ಬೆಳಗ್ಗೆ ಮಕ್ಕಳೊಂದಿಗೆ ಮನೆಯ ಮುಂಭಾಗ ಆಟವಾಡುತ್ತಿದ್ದ ಸಂದರ್ಭದಲ್ಲಿ ಅದೇ ಕೋತಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದ್ದು, ಮನೆಯವರು ಬಂದು ಗದರಿದಾಗ ಕೋತಿ ಓಡಿ ಹೋಗಿದೆ.
ತಕ್ಷಣ ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ರೇಬೀಸ್ ಚುಚ್ಚು ಮದ್ದನ್ನು ಕೊಡಿಸಿದ್ದು, ಆಸ್ಪತ್ರೆಯ ವೈದ್ಯರು ಇದು ಮಂಗನಿಂದ ದಾಳಿಗೊಳದಾಗ ಗಾಯವಾಗಿರುವುದರಿಂದ ನಿರ್ಲಕ್ಷ್ಯ ಮಾಡದೇ ಹೆಚ್ಚಿನ ಚಿಕಿತ್ಸೆ ಕೊಡಿಸಲು ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಬಾಲಕಿಯನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹಿಮ್ಯೂನೋಗ್ಲೋಬ್ಲಿನ್ ಚುಚ್ಚು ಮದ್ದನ್ನು ಕೊಡಿಸಲಾಗಿದೆ.
ನಂತರ ಬಹಳಷ್ಟು ಜನರನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಮನೆಯ ಮೇಲೆ ಒಣಗಲು ಹಾಕಿದ್ದು ಬಟ್ಟೆಗಳನ್ನೆಲ್ಲ ಹರಿದು ಹಾಕಿದೆ, ಕೋತಿಯ ದಾಳಿಗೆ ಮಕ್ಕಳೆಲ್ಲ ಹೆದರಿ ಭಯದ ವಾತಾವರಣದಲ್ಲಿದ್ದಾರೆ, ತಕ್ಷಣ ಅರಣ್ಯ ಇಲಾಖೆಯವರು ಈ ಕೋತಿಯನ್ನು ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Comments are closed.