ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಅಧಿಕೃತವಾಗಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು, ಕರ್ನಾಟಕ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕೂಡ ಉಪಸ್ಥಿತರಿದ್ದರು.
ಬಿಜೆಪಿ ಸೇರ್ಪಡೆಯಾಗುವ ಮುನ್ನ ಅಂಬರೀಶ್ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದರು, ಪುತ್ರ ಅಭಿಷೇಕ್ ಅಂಬರೀಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಯಲ್ಲಿದ್ದರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದ ಸುಮಲತಾ ಬಿಜೆಪಿಗೆ ಸೇರುವುದಾಗಿ ಘೋಷಣೆ ಮಾಡಿದ್ದರು, ಬುಧವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ್ದ ಅವರು ಟಿಕೆಟ್ ಸಿಗದಿದ್ದರೆ ಹಲವು ರಾಜಕಾರಣಿಗಳು ಪಕ್ಷ ಬದಲಾಯಿಸುತ್ತಾರೆ, ಆದರೆ ನಾನು ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದರು.
ಬಿಜೆಪಿ ಸೇರಿದ ನಂತರ ಮಾತನಾಡಿದ ಸುಮಲತಾ, ಬಿಜೆಪಿ ಸೇರ್ಪಡೆ ನನ್ನ ಉತ್ತಮ ಆಯ್ಕೆ ಎನಿಸಿತ್ತು, ಬೊಮ್ಮಾಯಿ ನನಗೆ 50 ಕೋಟಿ ರೂ. ಅನುದಾನ ನೀಡಿದ್ದರು, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನನ್ನ ಪರ ಪ್ರಚಾರ ಮಾಡಿದ್ದನ್ನು ಮರೆಯಲಾಗದು, ಮಂಡ್ಯ ಜಿಲ್ಲೆಗೆ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಬಿಜೆಪಿಗೆ ಸೇರಬೇಕು ಎಂದರು.
ಬಿಜೆಪಿ ಸೇರ್ಪಡೆಗೂ ಮುನ್ನ ಸುಮಲತಾ ಅಂಬರೀಶ್ ಅವರು, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದರು.
ಪ್ರಧಾನಿ ಮೋದಿಯೇ ನನಗೆ ಸ್ಪೂರ್ತಿ
ಇವತ್ತಿನ ನನ್ನ ರಾಜಕೀಯ ಜೀವನದಲ್ಲಿ ಸುದಿನ, ಐದು ವರ್ಷಗಳ ಹಿಂದೆ ಮಂಡ್ಯದಲ್ಲಿ ಐತಿಹಾಸಿಕ ಗೆಲುವು ಸಿಕ್ಕಿತ್ತು, ಆ ಗೆಲುವನ್ನು ನಾನು ಎಂದೆಂದಿಗೂ ಮರೆಯೋಕೆ ಸಾಧ್ಯವಿಲ್ಲ, ಅಂಬರೀಶ್ ಅಭಿಮಾನಿ ಬಳಗ ಅವತ್ತು ಬಿಜೆಪಿ ಬಾಹ್ಯ ಬೆಂಬಲವನ್ನು ಕೊಟ್ಟ ನನಗೆ ಸಾಕಷ್ಟು ಶಕ್ತಿ ತುಂಬಿದೆ.
ನರೇಂದ್ರ ಮೋದಿಯವರು ಮೈಸೂರಿಗೆ ಬಂದಾಗ ಅವರೂ ನನ್ನ ಪರವಾಗಿ ಮತ ಕೊಡಿ ಎಂದು ಪ್ರಚಾರ ಮಾಡಿದ್ದನ್ನು ನಾನು ಮರೆಯೋದಿಲ್ಲ, ಐದು ವರ್ಷ ಸಂಸದರಾಗಿ ಸಾಕಷ್ಟು ಕಲಿತಿದ್ದೇನೆ, ಸಾಕಷ್ಟು ಅನುಭವ ಆಗಿದೆ, ಅಂಬರೀಶ್ ಕಾಂಗ್ರೆಸ್ ನಲ್ಲಿದ್ದವರು, ನಾನು ಸಂಸದಳಾಗಿದ್ದಾಗ ಬಿಜೆಪಿಯವರಿಂದ ಮಾರ್ಗದರ್ಶನ ಸಿಕ್ಕಿದೆ, ಇದೇ ನನಗೆ ಸ್ಪೂರ್ತಿ, ನರೇಂದ್ರ ಮೋದಿಯವರ ನಾಯಕತ್ವ ನೋಡಿ ನಾನು ಬಿಜೆಪಿ ಸೇರಿದರೆ ಒಳ್ಳೆಯದು ಅನಿಸಿತು ಎಂದು ತಿಳಿಸಿದರು.
Comments are closed.