ಟ್ರಾಕ್ಟರ್ ಜಾಥಾ ಮೂಲಕ ಮತದಾನ ಜಾಗೃತಿ

31

Get real time updates directly on you device, subscribe now.


ತುಮಕೂರು: ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಸಿಇಓ ಜಿ.ಪ್ರಭು ತಿಳಿಸಿದ್ದಾರೆ.
ತುಮಕೂರು ನಗರದ ಯಲ್ಲಾಪುರದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಕಮಿಟಿಯ ನಿರ್ದೇಶನದಂತೆ ತೋಟಗಾರಿಕಾ ಇಲಾಖಾ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕುರಿತ ಟ್ರಾಕ್ಟರ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲಾ ಮತಗಟ್ಟೆಗಳಲ್ಲಿಯೂ ಶೇ.100 ರಷ್ಟು ಮತದಾನವಾಗಬೇಕೆಂಬುದು ಭಾರತ್ ಚುನಾವಣಾ ಆಯೋಗದ ಆಶಯವಾಗಿದ್ದು, ಅದನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಸ್ವೀಪ್ ಕಮಿಟಿ ಜಿಲ್ಲಾಡಳಿತದ ಸಹಕಾರದೊಂದಿಗೆ ಜಿಲ್ಲೆಯ ಎಲ್ಲಾ ಇಲಾಖೆಗಳ ಸಮನ್ವಯದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ವ್ಯಾಪಕವಾಗಿ ಕೈಗೊಂಡಿದೆ ಎಂದರು.

ತುಮಕೂರು ನಗರವಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮಪಂಚಾಯಿತಿ ಮಟ್ಟದಲ್ಲಿಯೂ ಸ್ವೀಪ್ ಕಮಿಟಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಪ್ರಿಲ್ 26ರ ಶುಕ್ರವಾರ ಅರ್ಹ ಮತದಾರರು ತಮ್ಮ ಹತ್ತಿರದ ಮತಗಟ್ಟೆಗೆ ಬಂದು, ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಚುನಾವಣೆ ಯಶಸ್ವಿಗೊಳಿಸಬೇಕೆಂಬ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ತೋಟಗಾರಿಕಾ ಇಲಾಖೆಯ ಸಹಕಾರದಲ್ಲಿ ರೈತರೊಂದಿಗೆ ಟ್ರಾಕ್ಟರ್ ಜಾಥಾ ಹಮ್ಮಿಕೊಂಡು, ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ, ಎಲ್ಲರು ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಮತ್ತು ಜವಾಬ್ದಾರಿ ಚಲಾಯಿಸಬೇಕೆಂಬುದು ಸಿಇಓ ಜಿ.ಪ್ರಭು ಮನವಿ ಮಾಡಿದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ ಮಾತನಾಡಿ, ಭಾರತ್ ಚುನಾವಣಾ ಆಯೋಗ ಮತ್ತು ಜಿಲ್ಲಾ ಸ್ವೀಪ್ ಕಮಿಟಿಯ ನಿರ್ದೇಶನದಂತೆ ನಮ್ಮ ಇಲಾಖೆವತಿಯಿಂದ ಮತದಾನ ಜಾಗೃತಿಗಾಗಿ ಟ್ರಾಕ್ಟರ್ ಜಾಥಾ ಹಮ್ಮಿಕೊಳ್ಳಲಾಗಿದೆ, ಈ ಜಾಥಾದಲ್ಲಿ ರೈತರ ಜೊತೆಗೆ, ಅಧಿಕಾರಿಗಳು ಟ್ರಾಕ್ಟರ್ ಹತ್ತಿ, ಭಿತ್ತಿ ಫಲಕಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಮತದಾನ ಮಹತ್ವ ಮತ್ತು ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ, ಸಧೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಮತದಾನ ಮಾಡಬೇಕು, ಚುನಾವಣೆಯಲ್ಲಿ ಮತದಾನ ಮಾಡಲು ಬಡವ, ಬಲ್ಲಿದ, ಮೇಲು, ಕೀಳು ಎಂಬ ಭಾವನೆಯಿಲ್ಲ, ಎಲ್ಲಾ ಮತಗಳಿಗೂ ಒಂದೇ ಮೌಲ್ಯ, ಹಾಗಾಗಿ ನಿಮ್ಮ ಮತಗಳನ್ನು ಆಸೆ, ಆಮಿಷಗಳಿಗೆ ಬಲಿ ಕೊಡೆದೆ, ತಪ್ಪದೆ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಜನತೆಗೆ ಇರುವ ಸರ್ವಶ್ರೇಷ್ಠ ಅಧಿಕಾರ ಚಲಾಯಿಸಿ, ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಮನವಿ ಮಾಡಿದರು.

ನಗರದ ಯಲ್ಲಾಪುರದಿಂದ ಮಾವು, ಬಾಳೆ, ತಳಿರು ತೋರಣಗಳಿಂದ ಶೃಂಗಾರಗೊಂಡ ಸುಮಾರು 25ಕ್ಕೂ ಹೆಚ್ಚು ಟ್ರಾಕ್ಟರ್ ಗಳಲ್ಲಿ ರೈತರು, ಅಧಿಕಾರಿಗಳು ಎಪಿಎಂಸಿ ಮಾರುಕಟ್ಟೆ, ಶಿರಾಗೇಟ್, ಅಮಾನಿಕೆರೆಯವರೆಗೂ ಜಾಥಾ ನಡೆಸಿ ಮುಕ್ತಾಯಗೊಳಿಸಿದರು.
ಈ ವೇಳೆ ತಾಲೂಕು ಸ್ವೀಪ್ ಕಮಿಟಿ ಅಧ್ಯಕ್ಷ ಹರ್ಷಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಸ್ವೀಪ್ ಕಮಿಟಿ ಕೃಷಿ ಇಲಾಖೆ ಎಡಿಎ ಅಶೋಕ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ರೂಪ, ತಾಲೂಕು ಸಹಾಯಕ ನಿರ್ದೇಶಕರಾದ ಸ್ವಾಮಿ ಮಧುಗಿರಿ, ಸುಧಾಕರ್ ಶಿರಾ, ಅಂಜನ್, ದರ್ಶನ್, ಶಿವಕುಮಾರ್, ರಾಘವೇಂದ್ರ, ವಿಶ್ವನಾಥ್ ಸೇರಿದಂತೆ ತೋಟಗಾರಿಕಾ ಇಲಾಖೆಯ ಸಿಬ್ಬಂದಿ, ರೈತರು, ಟ್ರಾಕ್ಟರ್ ಗಳ ಮಾಲೀಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!