ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ರಾಂಪುರದ ರೈತ ರೇಣುಕಪ್ರಸಾದ್ ಅವರ ಕೊಬ್ಬರಿಶೆಡ್ಡಿಗೆ ಬುಧವಾರ ತಡ ರಾತ್ರಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬೆಂಕಿಹಚ್ಚಿದ್ದರಿಂದ ಸುಮಾರು 30 ಸಾವಿರ ಕೊಬ್ಬರಿ, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ಸುಟ್ಟು ಬೂದಿಯಾಗಿವೆ.
ರಾತ್ರಿಯಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡುವಂತಾಯಿತು, ವಿಷಯ ತಿಳಿದ ತಕ್ಷಣ ತಡ ರಾತ್ರಿಯೇ ಅಗ್ನಿಶಾಮಕ ದಳದವರು ಆಗಮಿಸಿ ಬೆಳಗಿನ ಜಾವದ ವರೆಗೂ ಬೆಂಕಿ ನಂದಿಸಿದ್ದಾರೆ.
ರೈತ ರೇಣುಕಪ್ರಸಾದ್ ತಾಯಿ ಶಿವಗಂಗಮ್ಮ ಹಾಗೂ ಕುಟುಂಬ ಸಮೇತ ತೋಟದ ಮನೆಯಲ್ಲಿ ವಾಸವಿದ್ದು, ಮನೆಯ ಸಮೀಪದಲ್ಲಿಯೇ ಕಾಯಿ ತುಂಬಲು ಶೆಡ್ ನಿರ್ಮಿಸಿಕೊಂಡಿದ್ದರು, ಶೆಡ್ ನಲ್ಲಿಯೇ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು, ಶೆಡ್ ಗೆ ಯಾವುದೇ ವಿದ್ಯುತ್ ಸಂಪರ್ಕ ಹಾಗೂ ಸಮೀಪ ಯಾವುದೇ ವಿದ್ಯುತ್ ತಂತಿಗಳೂ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ರೇಣುಕಾ ಪ್ರಸಾದ್ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲಿಸಿ ಹಲವು ಮಾದರಿ ಸಂಗ್ರಹಿಸಿ ಹೆಚ್ಚಿನ ತನಿಖೆಗಾಗಿ ಕೊಂಡೊಯ್ದಿದ್ದಾರೆ, ಶೆಡ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಶೆಡ್ ನಲ್ಲಿದ್ದ ಎಲ್ಲಾ ಪರಿಕರ ಸುಟ್ಟುಹೋಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ರೇಣುಕಪ್ರಸಾದ್ ಕೊಳವೆಬಾವಿ ಕೊರೆಸಲು ಕೊಬ್ಬರಿ ಇಟ್ಟುಕೊಂಡಿದ್ದರು ಎನ್ನಲಾಗಿದೆ, ಈಗ ಕೊಬ್ಬರಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಕುಟುಂಬ ಸಂಕಷ್ಟ ಎದುರಿಸುವಂತೆ ಆಗಿದೆ, ಈ ಅವಘಡ ತುಂಬಾ ಸಂಕಷ್ಟ ತಂದೊಡ್ಡಿದೆ, ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ಸಾಧ್ಯವಿರುವಷ್ಟು ಪರಿಹಾರ ಒದಗಿಸಿದಲ್ಲಿ ಮಾತ್ರ ಮತ್ತೆ ಬದುಕು ಕಟ್ಟಿಕೊಳ್ಳಬಹುದು,
ಇಲ್ಲವಾದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ರೈತ ರೇಣುಕ ಪ್ರಸಾದ್ ದುಃಖಿತರಾದರು.
Comments are closed.