ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಪ್ರದರ್ಶಿಸಿದ್ದು ಕಾಂಗ್ರೆಸ್

23

Get real time updates directly on you device, subscribe now.


ತುಮಕೂರು: ದೇಶದಲ್ಲಿ ಸ್ವಾತಂತ್ರಪೂರ್ವದಲ್ಲಿ ಮತ್ತು ಸ್ವಾತಂತ್ರ ನಂತರದಲ್ಲಿಯೂ ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಪ್ರದರ್ಶನ ಮಾಡಿದ್ದು ಕಾಂಗ್ರೆಸ್ ಪಕ್ಷ, ಹಾಗಾಗಿ ಶೋಷಿತ ಸಮುದಾಯಗಳಲ್ಲಿ ಒಂದಾದ ತಿಗಳ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಎಸ್.ಪಿ.ಮುದ್ದಹನುಮೇ ಗೌಡರನ್ನು ಗೆಲ್ಲಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೋರಿದರು.
ನಗರದ ಆಗ್ನಿವಂಶ ತಿಗಳರ ವಿದ್ಯಾಸಿರಿ ಭವನದಲ್ಲಿ ನಡೆದ ತಿಗಳ ಹಾಗೂ ಇನ್ನಿತರ ಶೋಷಿತ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ದೇಶದ ದಲಿತರಿಗೆ, ಶೋಷಿತ ವರ್ಗಕ್ಕೆ ಸಮಾನತೆ ಕೊಡುವುದು ಕಾಂಗ್ರೆಸ್ ಪಕ್ಷದ ಮುಖ್ಯ ಉದ್ದೇಶವಾಗಿದೆ, ಅದನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದೆ ಎಂದರು.

ಭಾರತದಲ್ಲಿ ಹುಟ್ಟಿರುವ ನಾವೆಲ್ಲರೂ ಸಮಾನರು ಎಂಬುದು ಕೇವಲ ಸಂವಿಧಾನಕಷ್ಟೇ ಸಿಮೀತವಾಗಿದೆ, ನಾವಿನ್ನು ಸಮಾನತೆಗಾಗಿ ಹೋರಾಡುತ್ತಿದ್ದೇವೆ, ಇಂತಹ ಸನ್ನಿವೇಶದಲ್ಲಿ ಬಿಜೆಪಿ ಪಕ್ಷದ ಮುಖಂಡರು ಸಂವಿಧಾನ ಬದಲಾವಣೆ ಮಾಡುವ ಮಾತುಗಳ್ನಾಡುತ್ತಿದ್ದಾರೆ, ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ, ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಇರುವ ಊರುಗೋಲಾದ ಮೀಸಲಾತಿಯ ಮೇಲೆ ಇವರಿಗೆ ಕಣ್ಣು, ಹಾಗಾಗಿ ಸಂವಿಧಾನ ಬದಲಾಯಿಸುವ ಮಾತುಗಳನ್ನು ಪದೇ ಪದೇ ಹೇಳುತ್ತಿದ್ದಾರೆ, ಇದರ ವಿರುದ್ಧ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೀಸಲಾತಿಯನ್ನು ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಹಂಚುವ ಉದ್ದೇಶದಿಂದ ರಚಿಸಿದ ಹಿಂದುಳಿದ ವರ್ಗಗಳ ಆಯೋಗದ ವರದಿ ಸರಕಾರದ ಕೈ ಸೇರಿದೆ, ಆದರೆ ಅದನ್ನು ಜಾರಿ ಮಾಡಲು ಕೆಲ ವರ್ಗಗಳು ವಿರೋಧಿಸುತ್ತಿವೆ, ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲಾ ಶೋಷಿತ ವರ್ಗಗಳಿಗೂ ನ್ಯಾಯ ಒದಗಿಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಜಾರಿಗೆ ತರಲಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಮಾತನಾಡಿ, ಸಂಸದರಾಗಿ ಆಯ್ಕೆಯಾದ ಬಳಿಕ ತಿಗಳ ಸಮುದಾಯಕ್ಕೆ ಹೆಚ್ಚಿನದಾಗಿ ಸಮುದಾಯ ಭವನಕ್ಕೆ ಎಂಪಿ ಅನುದಾನ ನೀಡಿದ್ದೇನೆ, ಅಲ್ಲದೆ ನಾನಾ ಅಭಿವೃದ್ಧಿ ಕೆಲಸ ಕೊಟ್ಟಿದ್ದೇನೆ, ಕೃಷಿಯನ್ನೇ ನಂಬಿಕೊಂಡಿರುವ ತಿಗಳ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿಯೂ ಮುಂದೆ ಬರಬೇಕು, ನಾನು ಸಂಸದನಾಗಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ, ರೈತರ ಪರ ನಿಂತಿದ್ದೇನೆ, ಹಾಗಾಗಿ ತುಮಕೂರು ಜಿಲ್ಲೆಯ ಮತ್ತಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶಾಸಕ ಹಾಗೂ ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಶೋಷಿತ ವರ್ಗದ ಧ್ವನಿಯಾಗಿ, ಸಮಾಜಿಕ ನ್ಯಾಯದ ಸಮಾಜ ಕಟ್ಟಲಿಕ್ಕೆ ಯಾರಾದರೂ ನಾಯಕರು ಇದ್ದಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ, ಲಿಂಗಾಯಿತ, ಒಕ್ಕಲಿಗರ ಅಬ್ಬರದ ನಡುವೆಯೂ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದರೆ ಅವರ ಆಡಳಿತ ವೈಖರಿ ನಿಮಗೆ ತಿಳಿದಿದೆ, ಹಾಗಾಗಿ ನಾವು ಮುದ್ದಹನುಮೇಗೌಡ ಅವರನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಕೆಲಸ ಮಾಡೋಣ ಎಂದರು.

ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಾಗೂ ತಿಗಳ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮದಾಸ, ಮುಖಂಡರಾದ ನಾಗರಾಜು, ಮುರುಳೀಧರ ಹಾಲಪ್ಪ, ರಾಮಕೃಷ್ಣ, ನರಸಿಂಹಮೂರ್ತಿ, ಸಿದ್ದೇಶ್, ಅರ್ಜುನ್, ಶಿವಣ್ಣ, ರೇವಣ್ಣಸಿದಯ್ಯ, ತರಕಾರಿ ಕೃಷ್ಣಪ್ಪ ಇತರರು ಇದ್ದರು.

ಹೆಚ್ ಡಿ ಡಿ- ಹೆಚ್ ಡಿ ಕೆ ಬಣ್ಣ ಬದಲಿಸಿದ್ರು: ಪರಂ
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ ಬಂದಾಗ ನಾವು ಒಪ್ಪಿಕೊಂಡವು, ಅವರ ಗೆಲುವಿಗೆ ನಾವೆಲ್ಲಾ ಪ್ರಾಮಾಣಿಕ ಕೆಲಸ ಮಾಡಿದೆವು, ನಾನು ಬುದ್ಧಿ ಬಂದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಕೊಂಡು ಬಂದಿದ್ದೇನೆ, ಆದರೆ ದೇವೇಗೌಡರು ನಿಂತಾಗ ಮೊದಲ ಬಾರಿಗೆ ಜೆಡಿಎಸ್ ಗೆ ಹಾಕಿದೆ, ಅವರು ಗೆಲ್ಲಲಿಲ್ಲ ಏನು ಮಾಡಲು ಸಾಧ್ಯ, ಆದರೆ ನೋಡ ನೋಡುತ್ತಲೇ ದೇವೇಗೌಡ, ಕುಮಾರಸ್ವಾಮಿ ಬಣ್ಣ ಬದಲಾಯಿಸಿದರು, ದೇಶದಲ್ಲಿ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದ ದೇವೇಗೌಡರು ಮೋದಿಯಂತಹ ಪ್ರಧಾನಿಯೇ ಇಲ್ಲ ಎನ್ನುತಿದ್ದಾರೆ, ಇವರ ಗೋಸುಂಬೆ ಮಾತುಗಳಿಗೆ ಜನರು ಮನ್ನಣೆ ನೀಡಬೇಕೇ ಎಂದು ಪರಮೇಶ್ವರ್ ಪ್ರಶ್ನಿಸಿದರು.

Get real time updates directly on you device, subscribe now.

Comments are closed.

error: Content is protected !!