ಕುಣಿಗಲ್: ಬೆಂಗಳೂರುಗ್ರಾಮಾಂತರ ಕ್ಷೇತ್ರದ ಕುಣಿಗಲ್ ತಾಲೂಕಿನ ಚುನಾವಣೆ ಅಧಿಕಾರಿಗಳು, ಪೊಲೀಸ್ ಆಧಿಕಾರಿಗಳು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ, ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಅಧಿಕಾರಿಗಳು ನ್ಯಾಯಯುತವಾಗಿ ನಡೆದುಕೊಳ್ಳದೆ ಇದ್ದಲ್ಲಿ ಬದಲಾವಣೆಗೆ ಒತ್ತಾಯ ಮಾಡಬೇಕಾಗುತ್ತದೆ ಎಂದು ಶಾಸಕ, ಬಿಜೆಪಿ ಮುಖಂಡ ಅಶ್ವಥನಾರಾಯಣ ಹೇಳಿದರು.
ಶುಕ್ರವಾರ ಕುಣಿಗಲ್ ಡಿವೈಎಸ್ಪಿ ಹಾಗೂ ತಹಶೀಲ್ದಾರ್ ಗೆ ಬಿಜೆಪಿ, ಜೆಡಿಎಸ್ ಮುಖಂಡರೊಂದಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ, ಸಮರ್ಪಕ ದೂರು ನೀಡಿದರೂ ಪೊಲೀಸರು ನ್ಯಾಯ ಸಮ್ಮತವಾಗಿ ದೂರು ದಾಖಲು ಮಾಡದೆ ಹಲ್ಲೆಕೋರರ ರಕ್ಷಣೆ ಮಾಡುತ್ತಿದ್ದಾರೆ.
ಇದರಿಂದ ತಾಲೂಕಿನಲ್ಲಿ ಭಯದ ವಾತವರಣ ಉಂಟಾಗಿ ನ್ಯಾಯ ಸಮ್ಮತ, ಮುಕ್ತ ಚುನಾವಣೆ ನಡೆಯುವುದು ಕಷ್ಟವಾಗಿರುವುದರಿಂದ ತಾಲೂಕು ಸೇರಿದಂತೆ ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಅರೆಸೇನಾ ಪಡೆ ರಕ್ಷಣೆಯಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಕೆಲಸ ಮಾಡಿದ್ದೇನೆ ಕೂಲಿ ಕೇಳುತ್ತೇನೆ ಎನ್ನುವ ಕಾಂಗ್ರೆಸ್ ನ ಸಂಸದರು ಕೆಲಸ ಮಾಡದೆ ಕುಕ್ಕರ್, ಸೀರೆ, ಹಣ ನೀಡಿ ಮತಯಾಚನೆ ಮಾಡುತ್ತಿದ್ದು, ಹತ್ತುವರ್ಷಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿ ಕೆಲಸ ಮಾಡಿರುವ ಮೋದಿಯವರ ಕೆಲಸ ನೋಡಿ ಮತದಾರರು ಕೂಲಿ ನೀಡುತ್ತಾರೆ, ಇದನ್ನು ಸಹಿಸಲಾಗದೆ ಹತಾಶರಂತೆ ಮೈತ್ರಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ತಾಲೂಕಿನ ಚುನಾವಣೆ ಸಹಾಯವಾಣಿ ಸತ್ತು ಹೋಗಿದೆ, ಚುನಾವಣೆ ಅಕ್ರಮದ ಬಗ್ಗೆ ಕರೆ ಮಾಡಿದರೂ ಸ್ವೀಕರಿಸಲ್ಲ, ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ನಂಬರ್ ಪಡೆದು ಚುನಾವಣೆ ಅಕ್ರಮಗಳ ಬಗ್ಗೆ ದೂರು ನೀಡಿದರೆ ಅಧಿಕಾರಿಗಳೆ ಅಕ್ರಮ ಎಸಗುವವರಿಗೆ ಮಾಹಿತಿ ನೀಡಿ ಏನೂ ಇಲ್ಲದಂತೆ ಮಾಡುವ ಕೆಲಸ ಮಾಡುತ್ತಿದ್ದು ಅಧಿಕಾರಿಗಳು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು ಸರಿಯಲ್ಲ, ಸಮರ್ಪಕವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು, ಅದು ಬಿಟ್ಟು ಒಂದು ಪಕ್ಷದ ಪರ ಕೆಲಸ ಮಾಡಿದರೆ ಅದರಿಂದಾಗುವ ಪರಿಣಾಮ ಎದುರಿಸಬೇಕಾಗುತ್ತದೆ, ನೀತಿ ಸಂಹಿತೆಗೆ ಬೆಲೆಕೊಟ್ಟು ಸುಮ್ಮನಿದ್ದೇವೆ, ಅಧಿಕಾರಿಗಳು ಪಕ್ಷಪಾತ ಕಾರ್ಯ ವೈಖರಿ ಮಾಡಿದಲ್ಲಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.
ಜೆಡಿಎಸ್ಮುಖಂಡ ಡಾ.ರವಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ನವರು ಸೋಲಿನ ಹತಾಶ ಮನೋಭಾವದಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ಮೈತ್ರಿ ಕಾರ್ಯಕರ್ತರ ತಾಳ್ಮೆಗೂ ಮಿತಿ ಇದೆ, ತಾವೂ ಸಹ ವ್ಯವಸ್ಥೆಗೆ ಬೆಲೆಕೊಟ್ಟು ಗೌರವದಿಂದ ನಡೆದುಕೊಳ್ಳುತ್ತಿದ್ದೇವೆ, ಆದರೆ ಅಧಿಕಾರಿಗಳು ತಾರತಮ್ಯ ಮಾಡಿ ಅದರಿಂದ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಆದಲ್ಲಿ ಮುಂದೆ ಯಾರನ್ನು ಮುಟ್ಟಬೇಕೋ ಮುಟ್ಟುತ್ತೇವೆ, ಅದರ ಪರಿಣಾಮ ಅಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರು ಡಿವೈಎಸ್ಪಿ ಓಂಪ್ರಕಾಶ್, ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ, ಇದೆ ಪ್ರತಿಯನ್ನು ರಾಜ್ಯ ಚುನಾವಣೆ ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದರು, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಜಗದೀಶ್, ಬಿಜೆಪಿ ಅಧ್ಯಕ್ಷ ಬಲರಾಮ್ ಸೇರಿದಂತೆ ಎರಡೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
Comments are closed.