ತುಮಕೂರು: ರಾಜಕೀಯ ಅಧಿಕಾರಕ್ಕಾಗಿ ಗೋವಿಂದರಾಜ ನಗರ, ವರುಣ, ಚಾಮರಾಜ ನಗರ, ತುಮಕೂರು ಎಂದು ಅಲೆಯುತ್ತಿರುವ ವಿ.ಸೋಮಣ್ಣ ಈ ಚುನಾವಣೆಯಲ್ಲಿ ಸೋತರೆ ಮುಂದಿನ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ, ಅಧಿಕಾರಕ್ಕಾಗಿ ಈ ರೀತಿ ಊರೂರು ಅಲೆಯುವ ವ್ಯಕ್ತಿ ತುಮಕೂರು ಜಿಲ್ಲೆಗೆ ಬೇಕೆ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ನಗರದ ಕುಣಿಗಲ್ ರಸ್ತೆಯ ಮಾರುತಿ ಮಹಾರಾಜ ಕನ್ವಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕುರುಬ ಸಮಾಜದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ದೇಶವೇ ಒಪ್ಪಿಕೊಳ್ಳುವಂತಹ ಸಿದ್ದರಾಮಯ್ಯನವರ ವಿರುದ್ಧ ವರುಣಾದಲ್ಲಿ ಸ್ಪರ್ಧಿಸುವ ಇವರು ಮುಂದೊಂದು ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವಿರುದ್ಧವೇ ಶಿಕಾರಿಪುರದಲ್ಲಿ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಈಗ ನಡೆಯುತ್ತಿರುವ ಚುನಾವಣೆ ಸಂವಿಧಾನದ ಫಲದಿಂದ ರಾಜಕೀಯ ಅಧಿಕಾರ ದಕ್ಕಿಸಿಕೊಂಡಿರುವ ಅಹಿಂದ ಸಮುದಾಯ ಮತ್ತು ಜಾತಿಯ ಕಾರಣಕ್ಕೆ ನಿರಂತರ ಅಧಿಕಾರ ಅನುಭವಿಸುತ್ತಿರುವ ಮೇಲ್ವರ್ಗಗಳ ನಡುವೆ ನಡೆಯುತ್ತಿರುವ ಸಂಘರ್ಷವಾಗಿದೆ, ಈಗ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆಂದು ನಾವು ಅಧಿಕಾರದ ಹಂಚಿಗೂ ಬರಲು ಸಾಧ್ಯವಿಲ್ಲ, ಈ ಎಚ್ಚರಿಕೆಯನ್ನು ಎಲ್ಲಾ ಅಹಿಂದ ವರ್ಗಗಳು ಹೊಂದಿ ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ಮತ್ತು ಅವರ ಜನಪರ ಆಡಳಿತ ವೈಖರಿ ಬಹುತೇಕರಿಗೆ ಸಹಿಸಲಾಗುತ್ತಿಲ್ಲ, ಹೀಗಾಗಿ ಸಮಾದಾನವಿಲ್ಲದೇ ಅವರ ವಿರುದ್ಧ ಅನವಶ್ಯಕ ಟೀಕೆ ಮಾಡುತ್ತಿದ್ದಾರೆ, 15 ಬಾರಿ ಬಜೆಟ್ ಮಂಡಿಸಿದ್ದಾರೆ, ಯಾವ ಸಮುದಾಯಕ್ಕೆ, ಯಾವ ವಲಯಕ್ಕೆ ಎಷ್ಟು ಹಣ ಖರ್ಚು ಮಾಡಬೇಕು ಎಂಬ ಬುದ್ಧಿವಂತಿಕೆ ಇದೆ, ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ, ಹಿಂದುಳಿದ ವರ್ಗದ ವ್ಯಕ್ತಿ ಬುದ್ಧಿವಂತಿಕೆಯಿಂದ ಆಡಳಿತ ನಡೆಸುತ್ತಾನೆ ಎಂದರೆ ಹೇಗೆ ಸಹಿಸುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಮಾತನಾಡಿ, 2014ರ ಲೋಕಸಭಾ ಚುನಾವಣೆಯಲ್ಲಿ ಅನೇಕ ಅಹಿಂದ ಸಮುದಾಯಗಳು ನನ್ನ ಬೆನ್ನಿಗೆ ನಿಂತು ಗೆಲುವು ಸಾಧಿಸಲು ಕಾರಣವಾಗಿವೆ, ಈ ಬಾರಿಯ ಚುನಾವಣೆಯಲ್ಲಿಯೂ ಕುರುಬ ಸಮುದಾಯ ನನ್ನ ಗೆಲುವಿನಲ್ಲಿ ಪಾತ್ರ ವಹಿಸಬೇಕು, ನಿಮ್ಮ ನಂಬಿಕೆ ಹುಸಿಗೊಳಿಸದೆ ರಾಜ್ಯದ, ಜಿಲ್ಲೆಯ ಘನತೆ ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ, ಸಂಸತ್ತಿನಲ್ಲಿ ಜಿಲ್ಲೆಯ ಕೊಬ್ಬರಿ, ನೀರಾವರಿ, ರೈತರ ಆತ್ಮಹತ್ಯೆ, ಹೆಚ್ ಎಂಟಿ, ಹೆಚ್ಎಎಲ್, ಮಹದಾಯಿ, ಮೇಕೆದಾಟು ಯೋಜನೆಗಳ ಕುರಿತು ಮಾತನಾಡಿದ್ದೇನೆ, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿ ಮಾತನಾಡಿದ್ದೇನೆ, ತಮ್ಮ ಸಂಸದ ಜೀವನದಲ್ಲಿಯೇ ಒಮ್ಮೆಯೂ ಮಾತನಾಡಿದ ವ್ಯಕ್ತಿಯ ಮಾತು ಕೇಳಿ ಹೊರಗಿನವರಿಗೆ ಮತ ಹಾಕುವುದರಿಂದ ಜಿಲ್ಲೆಯ ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ ಎಂದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಈ ದೇಶದ ಸಮರ್ಥ ಓಬಿಸಿ ನಾಯಕ ಎಂದರೆ ಅದು ಸಿದ್ದರಾಮಯ್ಯ, ಮಹಾನ್ ಸುಳ್ಳುಗಾರ ಮೋದಿಯನ್ನು ಎದುರಿಸುವ ಸಾಮರ್ಥ್ಯ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ, ಹಾಗಾಗಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಅವರ ಕೈ ಬಲಪಡಿಸಬೇಕಿದೆ ಎಂದರು.
ಅಹಿಂದ ಮುಖಂಡ ರಾಮಚಂದ್ರಪ್ಪ, ಮಾಜಿ ಶಾಸಕ ಡಾ.ರಫೀಕ್ ಅಹಮದ್, ರಾಜ್ಯ ವಕ್ತಾರ ನಿಕೇತರಾಜ್ ಮೌರ್ಯ, ಮುಖಂಡ ಅನಿಲ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ್ ಹಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಇಕ್ಬಾಲ್ ಅಹಮದ್, ಪತ್ರಕರ್ತ ಎಸ್.ನಾಗಣ್ಣ, ಕುರುಬ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹ್ಮದ್, ಸೋಮಶೇಖರ್, ರುದ್ರಪ್ಪ, ಟಿ.ಇ.ರಘುರಾಮ್ ಇತರರು ಇದ್ದರು.
Comments are closed.