ತಿಪಟೂರು: 48 ವಷರ್ಗಳ ಕಾಲ ಸುದೀರ್ಘ ಆಳ್ವಿಕೆಯಲ್ಲಿ ಕಾಂಗ್ರೆಸ್ ಪಕ್ಷ ರೈತರಿಗೆ, ಜನ ಸಾಮಾನ್ಯರಿಗೆ, ಉದ್ಯಮಿಗಳಿಗೆ, ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಯಾವುದೇ ಅನುಕೂಲ ಮಾಡಿಲ್ಲ, ನಾನು ಯಾವುದೇ ಹುದ್ದೆ ಆಕಾಂಕ್ಷಿಯಾಗಿ ಲೋಕಸಭೆಗೆ ಸ್ಪರ್ಧಿಸಿಲ್ಲ, ರೈತರ ಪರ ನೂತನ ಕೃಷಿ ನೀತಿ, ಈ ಭಾಗದ ಕೊಬ್ಬರಿ ಬೆಳೆಗಾರ ರೈತರಿಗೆ ಕನಿಷ್ಠ 16 ಸಾವಿರ ಕೊಬ್ಬರಿ ಬೆಂಬಲ ಬೆಲೆ ನಿಗದಿಪಡಿಸಿ ನಿಮ್ಮೆಲ್ಲರ ಪರ ಲೋಕಸಭೆಯಲ್ಲಿ ಮಾತನಾಡಲು ಸ್ಪರ್ಧಿಸಿದ್ದೇನೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.
ತಾಲ್ಲೂಕಿನ ನೊಣವಿನಕೆರೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚಿಸಿ ಮಾತನಾಡಿ, ರಾಜ್ಯ ಸರ್ಕಾರ 5 ಗ್ಯಾರಂಟಿ ನೀಡಿ 1 ಲಕ್ಷದ 5 ಸಾವಿರ ಕೋಟಿ ಸಾಲ ಮಾಡಿ 58 ಸಾವಿರ ಕೋಟಿ ಯೋಜನೆ ನೀಡಿದೆ, ಮಾಡಿದ ಸಾಲವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ತೀರಿಸಬೇಕು ಎಂಬುದನ್ನು ಅರಿತು ಮತ ಚಲಾಯಿಸಿ ಎಂದು ಕರೆ ಕೊಟ್ಟರು.
ಕೊಬ್ಬರಿ ಬೆಂಬಲ ಬೆಲೆಗೆ ಹೋರಾಟ ಮಾಡಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ 12 ಸಾವಿರದ ಜೊತೆಗೆ ರಾಜ್ಯ ಸರ್ಕಾರದ 1250 ಇನ್ನು ರೈತರಿಗೆ ಸರಿಯಾಗಿ ನೀಡಿಲ್ಲ ಎಂದರು.
ಮಹಿಳೆಯರಿಗೆ 2 ಸಾವಿರ ನೀಡುವ ಸರ್ಕಾರ ಕೂಲಿ ಕಾರ್ಮಿಕರು, ಶ್ರಮ ಜೀವಿಗಳು, ಶ್ರಮದ ನೋವು ಮರೆಯಲು ಸಂಜೆ ಮದ್ಯದ ಅಂಗಡಿಗೆ ಹೋದರೆ ದುಪ್ಪಟ್ಟು ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಧೂಳಿ ಪಟವಾಗಲಿದೆ, 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವಿನ ನಗೆ ಬೀರಲಿದೆ, ಸೋಮಣ್ಣನವರು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ, ಎಲ್ಲರೂ ತಮ್ಮ ಬೂತ್ ಗಳಲ್ಲಿ ಹೆಚ್ಚಿನ ಮತ ಹಾಕಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.
ಮಾಜಿ ಸಚಿವ ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ನಟ ಜಗ್ಗೇಶ್ ಮಾತನಾಡಿದರು.
ಪ್ರಚಾರದಲ್ಲಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಮ್, ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಇದ್ದರು, ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು, ಅರ್ಧ ತಾಸಿಗೂ ಹೆಚ್ಚು ಕಾಲ ತುರುವೇಕೆರೆ- ತಿಪಟೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು, ಟ್ರಾಫಿಕ್ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಾದರಿ ಮೈತ್ರಿ ಸರ್ಕಾರ ರಚನೆಗೆ ಚಿಂತನೆ ನಡೆಸಲಾಗುವುದು. ರಾಜ್ಯದ ಜನತೆಗೆ, ಮಕ್ಕಳ ವಿದ್ಯಾಭ್ಯಾಸ, ರೈತರ ಸಾಲ ಮನ್ನಾ, ಭಾಗ್ಯಲಕ್ಷ್ಮಿ ಯೋಜನೆ, ನೀರಾವರಿ ಯೋಜನೆ, ಅಂತಹ ನೂರಾರು ಜನಪರ ಕಾರ್ಯಕ್ರಮ ರೂಪಿಸುತ್ತೇವೆ, ಜನಸಾಮಾನ್ಯರ ಮೈತ್ರಿ ಪಕ್ಷವಾಗಿ ಅಧಿಕಾರ ಬರಲಿದೆ, ಎರಡೂ ಪಕ್ಷದ ಮತದಾರರು ಸ್ವಾಗತಿಸಬೇಕು.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.
Comments are closed.