ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಶುಕ್ರವಾರ ಕೋಲ್ಕತ್ತಾದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಬಾಂಬ್ ಇಡುವ ಯೋಜನೆ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾ ನನ್ನು ರಾಷ್ಟ್ರೀಯ ತನಿಖಾ ದಳ ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮತೀನ್, ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ, ಉಗ್ರ ಶಾರಿಕ್ ಗೆ ಕುಕ್ಕರ್ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ, ಅದೇ ರೀತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮತೀನ್ ಮಸಲತ್ತು ಮಾಡಿದ್ದ ಎನ್ನುವುದು ಎನ್ ಐಎ ತನಿಖೆಯಿಂದ ಹೊರಬಿದ್ದಿದೆ.
ಮತೀನ್ ನೀಡಿದ ಸೂಚನೆಯಂತೆ ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ ಬಾಂಬರ್ ಮುಸಾವಿರ್ ಸೀದಾ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ, ಈತನಿಗಾಗಿ ಎನ್ ಐಎ ಅಧಿಕಾರಿಗಳು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯದಲ್ಲಿ ಶೋಧ ನಡೆಸಿದ್ರು, ಇಬ್ಬರು ಉಗ್ರರು ಪಶ್ಚಿಮ ಬಂಗಾಳದಲ್ಲಿ ಇದ್ದಾರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಎನ್ ಐಎ ಉಗ್ರರಾದ ಮುಸಾವಿರ್ ಹುಸೇನ್ ಹಾಗೂ ಮತೀನ್ ತಾಹ ನನ್ನ ಬಂಧಿಸಿದೆ.
ಸಿಎಂ ಸಿದ್ದರಾಮಯ್ಯ ಏನೆಂದರು?
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ದಳ ಮತ್ತು ಕರ್ನಾಟಕ ಪೊಲೀಸರಿಗೆ ನಾನು ಧನ್ಯವಾದ ಹೇಳುತ್ತೇನೆ, ಆರೋಪಿಗಳನ್ನು ತನಿಖೆ ಮಾಡಿದ ನಂತರ ಹೆಚ್ಚಿನ ವಿವರ ಗೊತ್ತಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಸಚಿವರು ಏನು ಹೇಳಿದರು?
ಬೆಂಗಳೂರು ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್ ಐಎ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕುರಿತು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ನಾವು ತನಿಖೆ ಆರಂಭಿಸಿದ್ದೇವೆ, ಎಲ್ಲಾ ಮಾಹಿತಿಯನ್ನು ಎನ್ ಐಎ ಜೊತೆ ಹಂಚಿಕೊಳ್ಳಲಾಗಿದೆ, ನಮ್ಮ ಪೊಲೀಸರು ತನಿಖೆಯ ಪ್ರಗತಿಯಲ್ಲಿದ್ದಾರೆ, ಆರೋಪಿ ಟೋಪಿ ಖರೀದಿಸಿದ್ದು ಚೆನ್ನೈನಲ್ಲಿ, ಬಾಂಬ್ ಇಟ್ಟ ನಂತರ ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯೋಜನೆ ಹೊಂದಿದ್ದರೋ ಇಲ್ಲವೋ ಎಂಬುದು ಗೊತ್ತಾಗಬೇಕಿದೆ, ವಿದೇಶಗಳಿಂದ ಅಥವಾ ಬೇರೆ ಕಡೆಯಿಂದ ಯಾರಾದರೂ ಅವರಿಗೆ ಸಹಾಯ ಮಾಡುತ್ತಿದ್ದರೇ ಎಂದು ತನಿಖೆಯಿಂದ ಪತ್ತೆ ಹಚ್ಚಲಾಗುವುದು ಎಂದರು.
ನ್ಯಾಯಾಧೀಶರ ಮುಂದೆ ಹಾಜರು..
ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾ ಎಂಬುವರನ್ನು ಎನ್ ಐಎ ಅಧಿಕಾರಿಗಳು ಕೋರಮಂಗಲದಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸದಲ್ಲಿ ಹಾಜರು ಪಡಿಸಿದರು, ಈ ವೇಳೆ ಸ್ಫೋಟ ಪ್ರಕರಣದಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಾಹಾ ಪ್ರಮುಖ ರೂವಾರಿಗಳು. ಇಬ್ಬರನ್ನೂ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಒಪ್ಪಿಸುವಂತೆ ಎಂದು ಎನ್ ಐಎ ಅಧಿಕಾರಿಗಳ ಪರ ವಕೀಲರು ನ್ಯಾಯಾಲಯವನ್ನು ಕೋರಿದರು, ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಇಬ್ಬರೂ ಶಂಕಿತರನ್ನು 10 ದಿನ ಎನ್ ಐಎ ವಶಕ್ಕೆ ಒಪ್ಪಿಸಿದ್ದಾರೆ, ಬಳಿಕ ಇಬ್ಬರು ಆರೋಪಿಗಳನ್ನು ಎನ್ ಐಎ ಅಧಿಕಾರಿಗಳು ಮಡಿವಾಳ ವಿಶೇಷ ವಿಚಾರಣಾ ಕೊಠಡಿಗೆ ಕರೆದೊಯ್ದರು.
ನಕಲಿ ಆಧಾರ ಕಾರ್ಡ್ ಪತ್ತೆ..
ಇಬ್ಬರ ಬಂಧನ ಬಳಿಕ ಉಗ್ರರ ಬಳಿ ಕರ್ನಾಟಕದ ಇಬ್ಬರ ನಕಲಿ ಆಧಾರ ಕಾರ್ಡ್ ಪತ್ತೆಯಾಗಿವೆ, ಎನ್ಐಎ ಅಧಿಕಾರಿಗಳು ಉಗ್ರರನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬಂಧಿಸಿದ್ದು, ಆರೋಪಿಗಳ ಬಳಿ ಕಲಬುರಗಿಯ ಓರ್ವ ಯುವಕನ ನಕಲಿ ಆಧಾರ ಕಾರ್ಡ್ ಪತ್ತೆಯಾಗಿದೆ.
ಕಲಬುರಗಿಯ ವರ್ದಾನಗರ ನಿವಾಸಿಯಾಗಿರುವ ಅನಮೂಲ್ ಕುಲಕರ್ಣಿ ಎಂಬ ಯುವಕನ ನಕಲಿ ಆಧಾರ್ ಕಾರ್ಡ್ ಉಗ್ರರ ಬಳಿ ಇತ್ತು, ಟೆಕ್ಕಿ ಅನಮೂಲ್ ಕುಲಕರ್ಣಿ ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಉಗ್ರರಿಗೆ ಅನಮೂಲ ಕುಲಕರ್ಣಿ ಅವರ ಆಧಾರ್ ಕಾರ್ಡ್ ಸಿಕ್ಕಿದ್ದಾದರು ಹೇಗೆ? ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಅನ್ನು ಉಗ್ರರರು ಹೇಗೆ ಪಡೆದರು? ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ.
Comments are closed.