ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಮಹಾ ರಥೋತ್ಸವ

ಯಡಿಯೂರಿನಲ್ಲಿ ಭಕ್ತ ಸಾಗರ- ಗ್ರಾಪಂ ಸಿಬ್ಬಂದಿಯಿಂದ ಮತದಾನ ಜಾಗೃತಿ

34

Get real time updates directly on you device, subscribe now.


ಕುಣಿಗಲ್: ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಯಡಿಯೂರು ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಮಹಾ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ರಾಜ್ಯದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಮಹಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು, ಉರಿಬಿಸಿಲನ್ನು ಲೆಕ್ಕಿಸದೆ ಅಸಂಖ್ಯಾತ ಭಕ್ತರು ಶ್ರೀಸ್ವಾಮಿಯವರ ತೇರು ಎಳೆದು ಪುನೀತರಾದರು, ಹರಕೆ ಹೊತ್ತ ಭಕ್ತರು ದವನ ಬಾಳೆ ಹಣ್ಣು, ಮೆಣಸು ಕಾಳನ್ನು ರಥಕ್ಕೆ ಎರಚಿ ಭಕ್ತಿ ಸಮರ್ಪಿಸಿದರು, ವಿವಿಧ ಪಕ್ಷಗಳ ಅಭಿಮಾನಿಗಳು ತಮ್ಮ ನಾಯಕರೆ ಮುಂದಿನ ಶಾಸಕರಾಗಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆಯುವ ಮೂಲಕ ಲೋಕಸಭೆ ಚುನಾವಣೆಯ ರಂಗು ರಥೋತ್ಸವಕ್ಕೂ ತಟ್ಟಿತ್ತು, ಶ್ರೀಗಳು ಗದ್ದುಗೆಯಲ್ಲಿ ಜೀವಂತ ಸಮಾಧಿಯಾದ ಅಭಿಜಿನ್ ಲಗ್ನದಲ್ಲಿ ಸಿದ್ದಗಂಗಾ ಶ್ರೀಗಳಾದ ಸಿದ್ದಲಿಂಗ ಮಹಾ ಸ್ವಾಮಿಗಳು, ಯಡಿಯೂರು ಬಾಳೆಹೊನ್ನುರು ಖಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು, ತಹಶೀಲ್ದಾರ್ ವಿಶ್ವನಾಥ್, ಯಡಿಯೂರು ದೇವಾಲಯ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು, ಯಡಿಯೂರು ಗ್ರಾಪಂ ಪಿಡಿಒ ಚಂದ್ರಹಾಸ್ ನೇತೃತ್ವದಲ್ಲಿ ರಥೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಮರೆಯದೆ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಲು ಬೃಹತ್ ಬ್ಯಾನರ್ ಹಿಡಿದು ಗ್ರಾಪಂ ಸಿಬ್ಬಂದಿ ಅರಿವು ಮೂಡಿಸಿದ್ದು ವಿಶೇಷವಾಗಿತ್ತು.

ರಥೋತ್ಸವ ಸಾಗುವ ದೇವಾಲಯದ ಮುಂಬದಿಯ ರಥಬೀದಿಯಲ್ಲಿ ಭಕ್ತರಿಗೆ ಬಿಸಿಲಿನ ತಾಪ ತಣಿಸಲು ಮೂರಕ್ಕೂ ಹೆಚ್ಚು ಟ್ಯಾಂಕರ್ ಗಳಿಂದ ನೀರು ಹಾಕುವ ಮೂಲಕ ರಥಬೀದಿಯನ್ನು ತಂಪುಗೊಳಿಸುವ ವ್ಯವಸ್ಥೆ ಮಾಡಲಾಗಿತ್ತು, ದೇವಾಲಯದ ಭಕ್ತರು, ಯಡಿಯೂರಿನ ನಾಗರಿಕರು ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ದಾಹ ತಣಿಸಲು ರಸ್ತೆಯ ಇಕ್ಕೆಲಗಳ ಪ್ರಮುಖ ಕಡೆಗಳಲ್ಲಿ ನೀರು ಮಜ್ಜಿಗೆ, ಪಾನಕ, ಹೆಸರು ಬೇಳೆ ಅರವಟ್ಟಿಗೆ ಸ್ಥಾಪಿಸಿ ವಿತರಿಸಲಾಯಿತು, ಮಹಾ ರಥೋತ್ಸವದ ನಂತರ ಅನ್ನ ದಾಸೋಹ ನೆರವೇರಿಸಿದರು.

Get real time updates directly on you device, subscribe now.

Comments are closed.

error: Content is protected !!