ಕುಣಿಗಲ್: ಹಾಸನದಿಂದ ಸ್ಪರ್ಧಿಸುವವರಿಗೆ ಮತ ನೀಡೋ ಬದಲು ಈ ಮನೆ ಮಗನಾಗಿದ್ದು ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕೆಲಸ ಮಾಡಿರುವ ನನಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.
ಸೋಮವಾರ ತಾಲೂಕಿನ ಕೊತ್ತಗೆರೆ ಹೋಬಳಿಯ ವಡ್ಡರಕುಪ್ಪೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಾ, ತಾಲೂಕಿನ ಜನರು ಸ್ವಾಭಿಮಾನಿ ಮತದಾರರಾಗಬೇಕು, ಇಲ್ಲಿ ಡಿ.ನಾಗರಾಜಯ್ಯ ಅಥವಾ ಡಿ.ಕೃಷ್ಣಕುಮಾರ್ ಮನೆಯವರು ಅಭ್ಯರ್ಥಿಯಾಗಿಲ್ಲ, ಹಾಸನದವರು ಅಭ್ಯರ್ಥಿಯಾಗಿದ್ದಾರೆ, ಅವರು ನಿಮ್ಮ ಸಮಸ್ಯೆಗೆ ಸ್ಪಂದಿಸಿಯೂ ಇಲ್ಲ, ನಿಮ್ಮ ಕೆಲಸ ಮಾಡೋದು ಇಲ್ಲ, ಹತ್ತುವರ್ಷ ಗಳಿಂದ ಕ್ಷೇತ್ರದ ಉದ್ದಗಲಕ್ಕೂ ತಾಲೂಕಿನ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿ ಕೆಲಸ ಮಾಡಿರುವ ನಾನು ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ, ಜೆಡಿಎಸ್, ಬಿಜೆಪಿಯವರ ಸತತ ವಿರೋಧದ ನಡುವೆಯೂ ತಾಲೂಕಿಗೆ ಸಮರ್ಪಕ ನೀರು ಹರಿಸುವ ಕಾಮಗಾರಿಯಾದ ಹೇಮೆ ಲಿಂಕ್ ಕೆನಾಲ್ 983 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಿ ಕೆಲಸ ಆರಂಭಿಸಿದ್ದೇವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಕ್ಷೇತ್ರದ ಅಭಿವೃದ್ಧಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಹೆಚ್ಚಿನ ಅನುದಾನ ನೀಡಲಿದ್ದು ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ಕ್ಷೇತ್ರಪ್ರತಿನಿಧಿಸಿದ್ದ ಜೆಡಿಎಸ್ ನ ಕುಮಾರಸ್ವಾಮಿಯವರು ಯಾವುದೇ ಅಭಿವೃದ್ಧಿ ಮಾಡಿಲ್ಲ, ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಯ ಫಲವನ್ನು ವಿರೋಧ ಪಕ್ಷದವರ ಕುಟುಂಬದವರು ಪಡೆಯುತ್ತಿದ್ದು ಅವರು ಸಹ ಕಾಂಗ್ರೆಸ್ ಬೆಂಬಲಿಸಬೇಕು, ತಾಲೂಕಿಗೆ ಶಾಶ್ವತ ಹೇಮೆ ನೀರು ಹರಿಸುವ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸುವ ಜೆಡಿಎಸ್, ಬಿಜೆಪಿಯವರ ಬಳಿ ತಾಲೂಕಿನ ಮತದಾರರು ಪ್ರಶ್ನಿಸಬೇಕು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಗ್ಯಾರಂಟಿ ಯೋಜನೆ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ, ರಾಜ್ಯಕ್ಕೆ ಕೇಂದ್ರದಿಂದ ಅಗಿರುವ ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಇಂದು ಸಂಸದ ಡಿ.ಕೆ.ಸುರೇಶ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ತುಟಿ ಬಿಚ್ಚುತ್ತಿಲ್ಲ, ಎನ್ ಡಿ ಆರ್ ಎಫ್ ಅಡಿಯಲ್ಲಿ ಕೇಂದ್ರ ಬರ ಪರಿಹಾರ ಹಣ ನೀಡಲು ತಾರತಮ್ಯ ಮಾಡುತ್ತಿದೆ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ್ದು ಮಹಿಳೆಯರು ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು, ತಾಲೂಕು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಸದ ಡಿ.ಕೆ.ಸುರೇಶ್ ಅವರನ್ನು ಮತ್ತೊಮ್ಮೆ ಬಹುಮತದಿಂದ ಆಯ್ಕೆ ಮಾಡಬೇಕೆಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವಕ್ತಾರ ಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಕೃಷಿಕ ಸಮಾಜದ ಅಧ್ಯಕ್ಷ ಪಾಪಣ್ಣ, ಮುಖಂಡರಾದ ಆಡಿಟರ್ ನಾಗರಾಜ್, ರಾಮಣ್ಣ, ಹುಚ್ಚಪ್ಪ, ಅನಿಲ್, ಪಾಪಣ್ಣ, ಕುಮಾರ, ಸುಮ ಇತರರು ಇದ್ದರು.
Comments are closed.