ತುಮಕೂರು: ಬರದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಮೇವು ಕೊರತೆ ಉಂಟಾಗಿ ತಮ್ಮ ಜಾನುವಾರುಗಳಿಗೆ ಮೇವು ಪೂರೈಸಲು ಕಂಗೆಟ್ಟದ್ದ ರೈತರ ಅನುಕೂಲಕ್ಕಾಗಿ ಜಿಲ್ಲಾಡಳಿತದ ವತಿಯಿಂದ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿಯಲ್ಲಿ ಸೋಮವಾರ ಮೇವು ಬ್ಯಾಂಕ್ ತೆರೆದು ಅರ್ಹ ರೈತರಿಗೆ 5.48 ಟನ್ ಮೇವು ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಬೆಳ್ಳಾವಿಯ ಕುವೆಂಪು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಮೇವು ಬ್ಯಾಂಕ್ ತೆರೆದಿದ್ದು, ಮೇವಿನ ವಿತರಣಾ ಕಾರ್ಡು ಪಡೆದವರು ಮೇವು ಬ್ಯಾಂಕಿಗೆ ಭೇಟಿ ನೀಡಿ ಪ್ರತಿ ಕೆಜಿ ಮೇವಿಗೆ 2 ರೂ. ನಂತೆ ಪಾವತಿಸಿ ಮೇವು ಪಡೆಯಬಹುದಾಗಿದೆ, ಪ್ರತಿ ಜಾನುವಾರಿಗೆ 7 ದಿನಗಳಿಗಾಗುವಷ್ಟು ಪ್ರತೀ ದಿನಕ್ಕೆ 6 ಕೆಜಿ ಯಂತೆ ಒಟ್ಟು 42 ಕೆಜಿ ಮೇವು ವಿತರಿಸಲಾಗುವುದು.
ಜಾನುವಾರು ಮೇವಿನ ಅವಶ್ಯಕತೆಯಿರುವ ಹಾಗೂ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ರೈತರ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ಮೇವು ವಿತರಣೆ ಮಾಡಲು ಈಗಾಗಲೇ ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದರಂತೆ ಮೇವು ವಿತರಿಸಲಾಗುವುದು.
ಬೆಳ್ಳಾವಿ ಹೋಬಳಿ ವ್ಯಾಪ್ತಿಯಲ್ಲಿ 3 ಪಶುವೈದ್ಯ ಸಂಸ್ಥೆ ಹಾಗೂ ಸುಮಾರು 7000 ಜಾನುವಾರುಗಳಿದ್ದು, ಪ್ರತೀ ದಿನ 10 ಟನ್ ಮೇವು ವಿತರಿಸುವ ಗುರಿ ಹೊಂದಲಾಗಿದೆ, ಈಗಾಗಲೇ 184 ರೈತರು ಉಚಿತ ಮೇವು ವಿತರಣಾ ಕಾರ್ಡುಗಳನ್ನು ಪಡೆದಿದ್ದು, ಉಳಿದ ಅರ್ಹ ರೈತರು ಕಾರ್ಡುಗಳನ್ನು ಪಡೆದು ತಮ್ಮ ಜಾನುವಾರುಗಳಿಗೆ ಮೇವು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಮೇವು ಬ್ಯಾಂಕ್ ತೆರೆದ ಸಂದರ್ಭದಲ್ಲಿ ಪಶುವೈದ್ಯ ಇಲಾಖೆ ಉಪ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ, ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಕುಮಾರ್, ಪಶು ವೈದೈ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕಾಂತರಾಜು, ಪಶು ವೈದ್ಯಾಧಿಕಾರಿಗಳಾದ ಡಾ.ರುದ್ರ ಪ್ರಸಾದ್ ಡಾ.ಮಲ್ಲೇಶಪ್ಪ, ಕಂದಾಯ ನಿರೀಕ್ಷಕ ಮಹೇಶ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
Comments are closed.