ಸೋಮಣ್ಣ ಗೆದ್ದರೆ ದೇವೇಗೌಡರೇ ಗೆದ್ದಂತೆ

ರಾಜ್ಯದ 28 ಕ್ಷೇತ್ರದಲ್ಲೂ ಪ್ರಚಾರ ಮಾಡ್ತೀನಿ: ಹೆಚ್.ಡಿ.ದೇವೇಗೌಡ

27

Get real time updates directly on you device, subscribe now.


ಕೊರಟಗೆರೆ: ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲೂ ನಮ್ಮ ಮೈತ್ರಿ ಅಭ್ಯರ್ಥಿಗಳೇ ಗೆಲ್ತಾರೇ, ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳ ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳಿಸಿಕೊಡುವ ಶಕ್ತಿ ಇನ್ನೂ ಇದೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಆಗುವ ಅರ್ಹತೆ ಯಾರಿಗೇ ಇದೇ ಹೇಳಿ, ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆದ್ದರೇ ನಿಮ್ಮ ದೇವೇಗೌಡರೇ ಗೆದ್ದಂತೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.
ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯಾತೀತ ಜನತಾದಳ ಪಕ್ಷದಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಕಾವೇರಿ ವಿಚಾರದಲ್ಲಿ ಮೋದಿ ನಂಬಿದ್ದೇನೆ, 1962 ರಿಂದ ನಾನು ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದೇನೆ, ವಿ.ಸೋಮಣ್ಣ ಗೆದ್ರೇ ತಲೆ ಎತ್ತಿ ನಾನು ಮೋದಿಗೆ ಕಾವೇರಿ ನೀರು ಮತ್ತು ಮೇಕೆದಾಟಿನ ಬಗ್ಗೆ ಪ್ರಶ್ನೆ ಮಾಡ್ತೀನಿ, ತಮಿಳುನಾಡಿನ ಸ್ಟಾಲಿನ್ ನೀರಿನ ವೈರತ್ವದ ಬಗ್ಗೆ ಪ್ರಧಾನಿ ಮೋದಿಗೂ ಅರ್ಥ ಆಗಿದೆ, ನಾನು 2019ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಆದರೆ ಈಬಾರಿ ವಿ.ಸೋಮಣ್ಣ ಗೆದ್ದು ದೆಹಲಿಗೆ ಹೋಗಬೇಕಿದೆ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯನವರೇ ನೀವು ರಾಜ್ಯದ 7.5 ಕೋಟಿ ಜನರ ಮುಖ್ಯಮಂತ್ರಿ, 150 ಕೋಟಿ ಜನರ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಮುನ್ನ ಎಚ್ಚರ ವಹಿಸಿ, ಸೋಮಣ್ಣ ಎಲ್ಲಿಯವನು ಅಂತಾ ನೀವು ಕೇಳ್ತಿರಾ, ನೀವು ಎಲ್ಲಿಯವರು ಬಾದಾಮಿಗೆ ಯಾಕೆ ಹೋದ್ರಿ ಹೇಳಿ, ಹೆಗಡೆ ಸಿಎಂ ಆಗಿದ್ದಾಗ ಬರಗಾಲ ಇತ್ತು, ಆಗ ಅವರ ಕೇಂದ್ರ ಎಷ್ಟು ಹಣ ಕೊಡ್ತು ಅಂತಾ ಸಿದ್ದರಾಮಯ್ಯ ಹೇಳಲಿ, ನಾನು ತುಮಕೂರಿಗೆ ನೀರು ಕೋಡೋದಿಲ್ಲ, ಅಂತೇಳಿ ನನ್ನ ಸೋಲಿಸಿದ್ರು, ಈಗ ಬೆಂಗಳೂರಿನಲ್ಲಿ ಕುಡಿಯೋ ನೀರಿನದಂದೇ ಎಷ್ಟು ನಡೆಯುತ್ತಿದೆ ಎಂಬುದು ಮೋದಿಯ ಗಮನಕ್ಕೆ ಹೋಗಿದೆ ಎಂದರು.

ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಸಿದ್ದರಾಮಯ್ಯ ಸಿಎಂ ಮಾಡೋಕೆ 86 ಶಾಸಕರ ಸಹಿ ಹಾಕಿಸಿ ದೇವೇಗೌಡರಿಗೆ ಕೊಟ್ಟಿದ್ದು ಇದೇ ಸೋಮಣ್ಣ, ಒಂದೇ ಬೂತ್ ನಲ್ಲಿ 2 ಸಾವಿರ ಮತಗಳ ಲೀಡ್ ಕೊಡಿಸಿದ್ದು ಇದೇ ಸೋಮಣ್ಣ, ನೀವು ಮಾತನಾಡುವಾಗ ಅವರ ಅರ್ಹತೆ ಬಗ್ಗೆ ತಿಳಿಯಬೇಕಿದೆ, ನಿಮಗೆ ಅವಕಾಶ ಸಿಗ್ತು ನೀವು ಮುಖ್ಯಮಂತ್ರಿ ಆಗಿದ್ದೀರಿ, ಅರ್ಹತೆ ಇದ್ದೋರಿಗೆ ಸರಿಯಾದ ಅವಕಾಶ ಸಿಗೋದಿಲ್ಲ, ಅಧಿಕಾರ ಇದೆ ಎಂಬ ಮಾತ್ರಕ್ಕೆ ಇನ್ನೊಬ್ಬರನ್ನು ಟೀಕೆ ಮಾಡ್ಬೇಡಿ ಎಂದು ಕಿಡಿಕಾರಿದರು.
ನಾವು ಬಡವರ ಮಕ್ಕಳು ನಿಮ್ಮ ಹಾಗೆ ಶ್ರೀಮಂತರ ಮಕ್ಕಳಲ್ಲ, ನಾವು ಇನ್ನೊಬ್ಬರ ಬಗ್ಗೆ ರಾಜಕೀಯ ಪ್ರೇರಿತವಾಗಿ ಮಾತನಾಡಲ್ಲ, ಸೋಮಣ್ಣ ಹಿಂದೆ ಇಡೀ ಭಾರತ ದೇಶ ಇದೆ, ನರೇಂದ್ರ ಮೋದಿ, ಅಮಿತ್ಶಾ ಅಂತಹ ನಾಯಕರು ಇದ್ದಾರೆ, ನನಗೆ ಸಂಸ್ಕಾರ ಹೇಳಿಕೊಟ್ಟ ದೇವೇಗೌಡರು ಜೊತೆಗಿದ್ದಾರೆ, ನಾನು ಯಾರ ಬಗ್ಗೆ ಟೀಕೆ ಮಾಡೋದಿಲ್ಲ ಎಂದು ಪರೋಕ್ಷವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಟಾಂಗ್ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್, ಎಂಎಲ್ ಸಿ ನಾರಾಯಣ ಸ್ವಾಮಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ಬಿಜೆಪಿ ಯುವಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಪವನ್ ಕುಮಾರ್, ಗುರುದತ್, ದಾಸಲು ಕುಂಟೆ ರಘು ಇತರರು ಇದ್ದರು.

3 ಗಂಟೆ ತಡವಾದ ಸಮಾವೇಶ
ಮೈತ್ರಿ ಪಕ್ಷದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋಮವಾರ ಬೆ.10 ಗಂಟೆಗೆ ಬರಬೇಕಿತ್ತು, ಆದರೆ ಕೆಲವು ಕಾರಣದಿಂದ ಕಾರ್ಯಕ್ರಮಕ್ಕೆ 1 ಗಂಟೆಗೆ ಆಗಮಿಸಿದ ಪರಿಣಾಮ ಸಮಾವೇಶ ತಡವಾಗಿ ಆರಂಭವಾಯಿತು, ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಜನ ಮುಖಂಡರು ಮತ್ತು ಕಾರ್ಯಕರ್ತರು ಬಿಸಿಲಿನ ತಾಪಕ್ಕೆ ಕಾದು ಕಾದು ಬೇಜಾರಿನಿಂದ ಹಿಂದಿರುಗಿದ ಘಟನೆ ನಡೆಯಿತು.

ಹಾಲಿ ಸಂಸದ ಬಸವರಾಜು ಗೈರು
ಮೈತ್ರಿ ಪಕ್ಷದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಾವೇಶದಲ್ಲೂ ಗೈರಾಗಿದ್ದ ತುಮಕೂರು ಹಾಲಿ ಸಂಸದ ಜಿ.ಎಸ್.ಬಸವರಾಜು ಕೊರಟಗೆರೆಯಲ್ಲಿ ಸೋಮವಾರ ನಡೆದ ಮಾಜಿ ಪ್ರಧಾನಿಗಳ ಸಮಾವೇಶದಲ್ಲೂ ಮತ್ತೆ ಗೈರು, ಕೊರಟಗೆರೆಯಲ್ಲಿ ನಡೆದ ವಿ.ಸೋಮಣ್ಣನವರ ಸುದ್ದಿಗೋಷ್ಠಿ ಸೇರಿದಂತೆ ಕೊರಟಗೆರೆ ಕ್ಷೇತ್ರದ ಬೂತ್ ಮಟ್ಟದ ಸಭೆ ಮತ್ತು ಗ್ರಾಪಂ ಮಟ್ಟದ ಯಾವುದೇ ಸಮಾರಂಭದಲ್ಲಿ ಭಾಗವಹಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.

Get real time updates directly on you device, subscribe now.

Comments are closed.

error: Content is protected !!