ಕೈ ಮಹಿಳಾ ಕಾರ್ಯಕರ್ತೆಯರ ಬಂಧನಕ್ಕೆ ಆಗ್ರಹ

51

Get real time updates directly on you device, subscribe now.


ತುಮಕೂರು: ನಗರದ ಕುಂಚಿಟಿಗ ಸಮುದಾಯದ ಭವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕಾರ್ಯಕರ್ತರ ಸಭೆಯಲ್ಲಿ ವೇದಿಕೆಗೆ ನುಗ್ಗಿದ ಕೈ ಮಹಿಳಾ ಕಾರ್ಯಕರ್ತೆಯರನ್ನು ಬಂಧಿಸಬೇಕು ಹಾಗೂ ಭದ್ರತೆ ಒದಗಿಸುವಲ್ಲಿ ವಿಫಲರಾಗಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾನೂನು ವಿಭಾಗದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರತಾ ಲೋಪಕ್ಕೆ ಕಾರಣರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಬೇಕು, ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು, ಯಾವುದೇ ಸಭೆಗೆ ಅನುಮತಿ ಕೇಳಿದಾಗ ಮುಂದಿನ ದಿನಗಳಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಮಾಡುವ ಕುರಿತು ಭರವಸೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾನೂನು ಸಚಿವ ಎಸ್.ಸುರೇಶ್ ಕುಮಾರ್, ರಾಜ್ಯದಲ್ಲಿ ಮಹಿಳೆಯರ ನಡುವೆ ವೈಷಮ್ಯ ಹುಟ್ಟು ಹಾಕಿ ಅಶಾಂತಿ ಸೃಷ್ಟಿಸುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ವಿರುದ್ಧ ಸದಾ ಜನರನ್ನು ಎತ್ತಿ ಕಟ್ಟುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ರಾಜಣ್ಣ ಅವರ ಪ್ರಚೋದನೆಯಿಂದ ಈ ಘಟನೆ ನಡೆದಿದೆ, ಪಕ್ಷದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಭಯ ಹುಟ್ಟು ಹಾಕುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರಚಾರ ತಪ್ಪಿಸುವ ಏಕೈಕ ಉದ್ದೇಶ ಹೊಂದಲಾಗಿದೆ, ಘಟನೆ ನಡೆದಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ, ಮಾಜಿ ಪ್ರಧಾನ ಮಂತ್ರಿಯ ಕಾರ್ಯಕ್ರಮದಲ್ಲಿ ಉಂಟಾಗಿರುವ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸೂಕ್ತ ತನಿಖೆಯೊಂದಿಗೆ ಈ ಪಿತೂರಿಯ ಹಿಂದೆ ಇರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ರಾಷ್ಟ್ರದಲ್ಲಿ ಮಹತ್ವದ ಸ್ಥಾನ ಇದೆ, ಆದರೂ ಅವರ ಕಾರ್ಯಕ್ರಮದಲ್ಲಿ ಸೂಕ್ತ ಭದ್ರತೆ ಒದಗಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ, ಜೊತೆಗೆ ದುರುದ್ದೇಶ ಹೊಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ, ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಮಾಜಿ ಪ್ರಧಾನಿಗಳ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲು ಪೊಲೀಸರ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ, ಹಾಗಾಗಿ ಈ ಘಟನೆಗೆ ಕಾರಣರಾಗಿರುವವರ ವಿರುದ್ಧ ಹಾಗೂ ಭದ್ರತಾ ವೈಫಲ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕಾನೂನು ಘಟಕದ ರಾಜ್ಯಾಧ್ಯಕ್ಷ ವಸಂತಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಹಿಮಾನಂದ್, ಬ್ಯಾಟರಂಗೇಗೌಡ, ವಕೀಲರಾದ ರೇಖಾ ರಾಜುಗೌಡ, ರವಿಗೌಡ, ಮಹೇಶ್, ರೇಣುಕೇಶ್, ಪ್ರಕಾಶ್ ರಾವ್, ರಮೇಶ್, ನವೀನ್ ಚಂದ್ರಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!