ತುಮಕೂರು: ಅತ್ಯಂತ ನಂಬಿಕೆಗೆ ಅರ್ಹವುಳ್ಳ ಸಮುದಾಯಗಳಲ್ಲಿ ಗೊಲ್ಲ ಸಮುದಾಯವೂ ಒಂದು, ಹಾಗಾಗಿ ಕಾಂಗ್ರೆಸ್ ಪಕ್ಷ ಐದು ಜನರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅವರಿಗೆ ರಾಜಕೀಯ ಅಧಿಕಾರ ನೀಡಿದ್ದು, ಮುಂದೆಯೂ ಸಹ ರಾಜಕೀಯ ಸ್ಥಾನಮಾನಗಳಿಗಾಗಿ ಈ ಸಮುದಾಯ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ನಗರದ ಮಾರುತಿ ಮಹಾರಾಜ್ ಕನ್ವೆಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಗೊಲ್ಲ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೊಲ್ಲ ಸಮುದಾಯವನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಅವರ ಬಹುದಿನದ ಬೇಡಿಕೆಗೆ ಚಾಲನೆ ಸಿಕ್ಕಿದ್ದು, ಇದರಿಂದ ಸಮುದಾಯ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಮೇಲೆ ಬರಲು ಸಾಧ್ಯವೆಂಬುದು ಇವರ ನಂಬಿಕೆ, ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಎಸ್ಟಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದರು.
2006ರಲ್ಲಿ ಸಿದ್ದರಾಮಯ್ಯ ಅಹಿಂದ ಹೋರಾಟ ಪ್ರಾರಂಭಿಸದಿದ್ದರೆ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ, ಹಾಗೆಂದ ಮಾತ್ರಕ್ಕೆ ಹೋರಾಟ ನಿಲ್ಲಬಾರದು, ಅಹಿಂದ ಹೋರಾಟ ನಿರಂತರ, ಅದು ಎಲ್ಲಾ ಅಹಿಂದ ವರ್ಗಗಳಿಗೂ ರಾಜಕೀಯ ಸ್ಥಾನಮಾನ ಸಿಗುವವರೆಗೂ ಮುಂದುವರೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಎ ಎನ್ ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದಾರೆ, ಸುಮಾರು 90 ನಿಮಿಷಗಳ ಸಂದರ್ಶನದಲ್ಲಿ ಒಮ್ಮೆಯೂ ರೈತರ ಬಗ್ಗೆಯಾಗಲಿ, ಬಡವರ ಬಗ್ಗೆಯಾಗಲಿ ಮಾತನಾಡಿಲ್ಲ, ಅವರು ಅತಿ ಹೆಚ್ಚು ಮಾತನಾಡಿರುವುದೇ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ, 2014- 2024ರ ವರೆಗೆ ಮೋದಿಯ ಭಾಷಣಗಳನ್ನು ಜನರು ಮರೆತ್ತಿಲ್ಲ, ನೀವು ಹೇಳಿರುವುದೇನು, ಮಾಡಿರುವುದೇನು ಎಂಬುದನ್ನು ಜನರು ಅರಿತಿದ್ದಾರೆ ಎಂದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಯಾದವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆಕಿಲ್ಲ, ಮುಂದಿನ ದಿನಗಳಲ್ಲಿ ಒತ್ತು ನೀಡಲಾಗುವುದು, ಬಡವರ ಕೈ ಹಿಡಿಯುವ ಪಕ್ಷ ಎಂದರೆ ಕಾಂಗ್ರೆಸ್ ಮಾತ್ರ, ಅಂತಹ ಪಕ್ಷವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಗೊಲ್ಲ ಸಮುದಾಯ ಬೆಂಬಲಿಸುವ ಮೂಲಕ ತಾವು ಸಹ ರಾಜಕೀಯ ಅಧಿಕಾರ ಪಡೆಯಲು ಮುಂದಾಗಬೇಕೆಂದರು.
ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಮಹಾ ಭಾರತದ ಶ್ರೀಕೃಷ್ಣನಂತೆ ಯಾದವ ಸಮುದಾಯದ ಪಾಪಣ್ಣನವರು ಅರ್ಜುನನ ರೀತಿ ಮುದ್ದಹನುಮೇ ಗೌಡ ಅವರು ಜೋಡೆತ್ತು ಗಾಡಿಯಲ್ಲಿ ನಾಮಪತ್ರಿಕೆ ಸಲ್ಲಿಸಿದ್ದು ತುಮಕೂರು ಜಿಲ್ಲೆಯ ಇತಿಹಾಸ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇ ಗೌಡ ಅವರು ಸ್ಥಳೀಯರು, ಅವರಿಗೆ ಮತ ಹಾಕುವುದರಿಂದ ಕೆಲಸ ಕಾರ್ಯಗಳು ಸುಲಭವಾಗಲಿವೆ, ಇನ್ನೊಬ್ಬರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಹಾಗೂ ಕರ್ನಾಟಕ ಕೃಷಿಕ ಸಮಾಜದ ಗೌರವಾಧ್ಯಕ್ಷ ಪಾಪಣ್ಣ, ಗೊಲ್ಲ ಸಮುದಾಯದ ಮುಖಂಡರಾದ ಜಿ.ಜೆ.ರಾಜಣ್ಣ, ಪ್ರೇಮ ಮಹಾಲಿಂಗಯ್ಯ, ಎಸ್.ನಾಗಣ್ಣ, ಮಹಾಲಿಂಗಯ್ಯ, ಗಂಗಾಧರ್, ಚಿನ್ನಪ್ಪ, ಷಣ್ಮುಖಪ್ಪ, ಎನ್.ಗೋವಿಂದರಾಜು, ಪುಟ್ಟರಾಜು, ಸಿದ್ದಲಿಂಗೇಗೌಡ, ಪಾಲನೇತ್ರಯ್ಯ ಇತರರು ಇದ್ದರು.
Comments are closed.