ಕುಣಿಗಲ್: ಹೃದ್ರೋಗ ತಜ್ಞನಾಗಿ ಯಾವುದೇ ಜಾತಿ, ಧರ್ಮ, ಮತ ನೋಡದೆ ಚಿಕಿತ್ಸೆ ನೀಡಿದ್ದೇನೆ, ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಮತ್ತಷ್ಟು ಉತ್ತಮ ಸೇವೆ ನೀಡಲು ಎಲ್ಲಾ ವರ್ಗದ ಜನರು ಮತ ನೀಡಿ ನನಗೆ ಆಶೀರ್ವಾದ ಮಾಡಬೇಕೆಂದು ಡಾ.ಸಿ.ಎನ್.ಮಂಜುನಾಥ ಮನವಿ ಮಾಡಿದರು.
ಮಂಗಳವಾರ ಕುಣಿಗಲ್ ವಿಧಾನಸಭಾ ಕ್ಷೇತ್ರದ ವಿವಿಧೆಡೆಯಲ್ಲಿ ಮತಯಾಚನೆ ಮಾಡಿದ ಅವರು ಹಣದಿಂದ ಮನೆ ಕಟ್ಟಬಹುದು, ಆದರೆ ಮನಸು ಕಟ್ಟಬೇಕಾದರೆ ಗುಣದಿಂದಲೆ ಕಟ್ಟಬೇಕಿದೆ, ದುಡ್ಡಿನಿಂದ ಕಟ್ಟಿದ ಮನೆಯಲ್ಲಿ ಕೆಲವರು ವಾಸ ಇರಬಹುದು, ಗುಣದಿಂದ ಕಟ್ಟಿದ ಮನೇಲಿ ಯೋಗ್ಯರು, ಸಹೃದಯಿಗಳು ವಾಸ ಇರಬಹುದು, ವೈದ್ಯನಾಗಿ ಮಾನವೀಯತೆ ಹಿನ್ನೆಲೆಯಲ್ಲಿ ಮೊದಲ ಚಿಕಿತ್ಸೆ ನಂತರ ಹಣ ಎಂದು ಚಿಕಿತ್ಸೆ ನೀಡಿದ್ದು ನನಗೆ ಗೊತ್ತಿರೋದು ಒಂದೆ ಜಾತಿ ಅದು ಮನುಷ್ಯ ಜಾತಿ, ಎಂದು ಯಾವುದೇ ಭೇದಭಾವ ಇಲ್ಲದೆ ವಿಶೇಷವಾಗಿ ಬಡ ರೋಗಿಗಳಿಗೆ ಸ್ಪಂದಿಸಿ ಸೇವೆ ನೀಡಿದ್ದೆ, ಇದೀಗ ಮೊದಲು ಮತ, ನಂತರ ನಿರಂತರ ಸೇವೆ ಎಂಬ ಸಂಕಲ್ಪದೊಂದಿಗೆ ಮತ್ತಷ್ಟು ಹೆಚ್ಚಿನ ಸೇವೆ ಮಾಡಲು ಜನರ ಬಳಿ ನಿಂತಿದ್ದೇನೆ, ಎಲ್ಲಾ ವರ್ಗದ ಜನರು ನನಗೆ ಆಶೀರ್ವಾದ ಮಾಡಬೇಕೆಂದು ಕೋರಿದರು.
ವಿರೋಧ ಪಕ್ಷಗಳು ಹೇಳುವಂತೆ ಬಿಜೆಪಿ ಪಕ್ಷ ಸಂವಿಧಾನ ಬದಲಾವಣೆ ಮಾಡುವುದಿಲ್ಲ, ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳೆ ಜನತೆಗೆ ಸ್ಪಷ್ಟಪಡಿಸಿದ್ದಾರೆ, ಭಾರತ ದೇಶದ ಸಮಗ್ರ ವಿಕಸನಕ್ಕೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ ಅವರು ಬಿಜೆಪಿ ಪಕ್ಷವೂ ಎಲ್ಲಾ ಜಾತಿಯ ಜನರ ಕಲ್ಯಾಣಕ್ಕೆ ಹಲವಾರು ಅಭಿವೃದ್ಧಿ ಯೋಜನೆ ನೀಡಿದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಮೈತ್ರಿ ಅಭ್ಯರ್ಥಿಯಾದ ಡಾ.ಮಂಜುನಾಥ್ ಅವರ ಖ್ಯಾತಿ ಸಹಿಸಲಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್, ಮಂಜುನಾಥ ಹಾಸನದವರು, ಹೊರಗಿನವರು ಎನ್ನುತ್ತಾರೆ, ಅದೆ ರೀತಿ ಡಿ.ಕೆ.ಸುರೇಶ್ ಕುಣಿಗಲ್ ನವರಾ? ಇವರು ಸಹ ಹೊರಗಿನವರು, ಇದೆ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು ತಮ್ಮ ಸ್ವಂತ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸಿದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್ ಮುಖಂಡರು ಇದೀಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಂಜುನಾಥರವರ ಬಗ್ಗೆ ಮಾತನಾಡುತ್ತಾರೆ ಎಂದರು.
ಮಾಜಿ ಸಚಿವ ಗೋಪಾಲಯ್ಯ, ಮಾಜಿ ಶಾಸಕ ಮಸಾಲೆ ಜಯರಾಮ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಹರೀಶ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.
Comments are closed.