ತುಮಕೂರು: ನಗರದಲ್ಲಿ ನಡೆದ ಎನ್ ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಧಿಕ್ಕಾರ ಕೂಗಿ ಅವಮಾನಿಸಿದ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ್ದ ಎರಡೂ ಪಕ್ಷದ ಕಾರ್ಯಕರ್ತರು, ವಿಶೇಷವಾಗಿ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ಪಕ್ಷದ ವರ್ತನೆ ಹಾಗೂ ಪೊಲೀಸರ ನಿರ್ಲಕ್ಷತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಎನ್ ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಎರಡೂ ಪಕ್ಷಗಳ ಮುಖಂಡರು ಭಾಗವಹಿಸಿದ್ದರು, ಈ ವೇಳೆ ಸಭೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ದೇವೇಗೌಡರಿಗೆ, ಹೆಚ್.ಡಿ.ಕುಮಾರ ಸ್ವಾಮಿಯವರಿಗೆ ಧಿಕ್ಕಾರ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದ್ದರು, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನವರು ಪಿತೂರಿ ಮಾಡಿ ಈ ಘಟನೆಗೆ ಕಾರಣರಾಗಿದ್ದಾರೆ, ಮಾಜಿ ಪ್ರಧಾನಿಗಳಿಗೆ ನೀಡಬೇಕಾದ ಭದ್ರತೆ ಲೋಪ, ಪೊಲೀಸರ ನಿರ್ಲಕ್ಷ ಕಾರಣವಾಗಿದೆ ಎಂದು ಬಿಜೆಪಿ, ಜೆಡಿಎಸ್ ಮುಖಂಡರು ಟೀಕಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಎನ್ ಡಿ ಎ ಸಭೆಗಳಿಗೆ ಕಾಂಗ್ರೆಸ್ ನವರು ಅಡ್ಡಿ ಮಾಡಬಹುದೆಂದು ಮುಂಜಾಗ್ರತೆಯಾಗಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪೊಲೀಸರು ನಿರ್ಲಕ್ಷ ಮಾಡಿದ್ದಾರೆ, ನಮ್ಮ ಪಕ್ಷದ ಸಭೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರ ಉದ್ದೇಶ ಏನಿತ್ತು ಎಂಬ ಬಗ್ಗೆ ತನಿಖೆ ಆಗಬೇಕು, ಇದೇ ರೀತಿ ಗೃಹ ಸಚಿವರ ಸಭೆಗೆ ಯಾರಾದರೂ ನುಗ್ಗಿ ಅಡ್ಡಿ ಮಾಡಿದ್ದರೆ ನೀವು ಸುಮ್ಮನಿರುತ್ತಿದ್ದಿರಾ? ಪೊಲೀಸರು ತಾರತಮ್ಯ ಮಾಡುತ್ತಿದ್ದೀರಿ ಎಂದು ಪೊಲೀಸರನ್ನು ತರಾಟೆ ತೆಗೆದುಕೊಂಡರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ನಮ್ಮ ಚುನಾವಣಾ ಸಭೆಗೆ ಅಡ್ಡಿ ಪಡಿಸಲು ಕಾಂಗ್ರೆಸ್ ನವರು ಹೆಣ್ಣು ಮಕ್ಕಳನ್ನು ಕಳಿಸಿರುವುದು ದುರಾದೃಷ್ಟಕರ, ಅದು ಕಾಂಗ್ರೆಸ್ ಸಂಸ್ಕೃತಿ ಎತ್ತಿ ತೋರಿಸುತ್ತದೆ, ಇಂತಹ ಪ್ರಕರಣ ಮುಂದುವರೆದರೆ ಕಾಂಗ್ರೆಸ್ ಸಭೆಗಳು ನಡೆಯಲು ನಮ್ಮ ಎರಡೂ ಪಕ್ಷಗಳು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕುಮಾರ ಸ್ವಾಮಿಯವರ ಹೇಳಿಕೆಯನ್ನು ತಿರುಚಿ ಚುನಾವಣಾ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್ ನವರು ಹೊರಟಿದ್ದಾರೆ, ಈ ಬಗ್ಗೆ ಕುಮಾರ ಸ್ವಾಮಿಯವರು ವಿವರವಾದ ಮಾಹಿತಿ ನೀಡಿದ್ದಾರೆ, ಹೆಣ್ಣುಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಧಿಕ್ಕಾರ ಕೂಗಿ ಅಪಮಾನ ಮಾಡಿರುವುದು ಕಾಂಗ್ರೆನ್ ನ ಕೆಟ್ಟ ನಡವಳಿಕೆ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಎಸ್.ಶಿವಪ್ರಸಾದ್, ಬ್ಯಾಟರಂಗೇಗೌಡ, ಎಸ್.ಪಿ.ಚಿದಾನಂದ್, ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಜೆಡಿಎಸ್ ನಗರ ಅಧ್ಯಕ್ಷ ವಿಜಯ್ ಗೌಡ, ಮುಂಡರಾದ ಹೆಚ್.ಟಿ.ಚಂದ್ರಶೇಖರ್, ಬೆಳ್ಳಿಲೋಕೇಶ್, ಶ್ರೀನಿವಾಸ ಪ್ರಸಾದ್, ಟಿ.ಜಿ.ನರಸಿಂಹರಾಜು, ಸೋಲಾರ್ ಕೃಷಮೂರ್ತಿ, ರಂಗನಾಥ್, ಮುದಿಮಡು ರಂಗಸ್ವಾಮಯ್ಯ, ಭೈರೇಶ್, ರೇಖಾ ರಾಜು, ಪ್ರೇಮಾ ಹೆಗಡೆ, ವಿಜಯ ಭಾಸ್ಕರ್, ತಾಹೇರಾ ಕುಲ್ಸಂ, ಜ್ಯೋತಿ ತಿಪ್ಪೇಸ್ವಾಮಿ, ಲಕ್ಷ್ಮಮ್ಮ, ಯಶೋಧ, ರಾಧಮ್ಮ, ಡಾ.ಫರ್ಜಾನಾ, ಉಷಾ, ರಾಧಾ ಗಂಗಾಧರ್, ಆದ್ಯ ಮೊದಲಾದವರು ಭಾಗವಹಿಸಿದ್ದರು.
Comments are closed.