ಕುಣಿಗಲ್: ತಾಲೂಕಿನ ಯಡಿಯೂರು ಹೋಬಳಿಯ ದೇವಾಲಯ ಒಂದರಲ್ಲಿ ರಾಮನವಮಿ ಪ್ರಯುಕ್ತ ನೀಡಲಾಗಿದ್ದ ಪಾನಕ ನಿರ್ಮಜ್ಜಿಗೆ ಸೇವಿಸಿ 40ಕ್ಕೂ ಹೆಚ್ಚು ಮುಂದೆ ಅಸ್ವಸ್ಥರಾದ ಘಟನೆ ನಡೆದಿದೆ.
ತಾಲೂಕಿನ ಯಡಿಯೂರು ಹೋಬಳಿಯ ಕೊಡವತ್ತಿ ಗ್ರಾಮದ ಸಮೀಪದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ರಾಮನವಮಿ ಪ್ರಯುಕ್ತ ನೀರು ಮಜ್ಜಿಗೆ, ಪಾನಕ ವಿತರಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಗೊಲ್ಲರಹಟ್ಟಿ, ಮಂಗಳ, ದಾಸನಕಟ್ಟೆ, ಮಾರ್ಕೊನಹಳ್ಳಿ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ್ದರು, ಬುಧವಾರ ರಾತ್ರಿ ಕೆಲವರಿಗೆ ಅಸ್ವಸ್ಥತೆ ಕಾಣಿಸಿಕೊಂಡು ಯಡಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು, ಗುರುವಾರ ಬೆಳಗ್ಗೆ ಗುಣಮಖರಾಗದ ಕಾರಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹತ್ತು ಮಹಿಳೆಯರು, ಒಂಭತ್ತು ಪುರುಷರು, ನಾಲ್ಕು ವರ್ಷದ ಮಗು ಸೇರಿ ಇಪ್ಪತ್ತು ಮಂದಿ ಚಿಕಿತ್ಸೆಗೆ ದಾಖಲಾದರು, ಪ್ರಸಾದ ಸ್ವೀಕರಿಸಿದ ಬಹುತೇಕರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಮತ್ತು ಸಿಬ್ಬಂದಿ ಅಸ್ವಸ್ಥರಿಗೆ ಚಿಕಿತ್ಸೆ ಆರಂಭಿಸಿದರು.
ವಿಷಯ ತಿಳಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ಮರಿಯಪ್ಪ ಮತ್ತು ತಂಡ ಕೊಡವತ್ತಿ ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಡಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದರು, ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಮತ್ತು ವೈದ್ಯ ಡಾ.ರಂಗನಾಥ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಅಗತ್ಯ ಬಿದ್ದಲ್ಲಿ ರಕ್ತ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು, ಸಿಪಿಐ ಮಾಧ್ಯಾನಾಯಕ್ ಮತ್ತು ಸಿಬ್ಬಂದಿ ಅಸ್ವಸ್ಥರ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ.
Comments are closed.