ತುಮಕೂರು: ಸಾರ್ವಜನಿಕ ಉದ್ದೇಶದ ಕುಡಿಯುವ ನೀರಿನ ಪ್ರಸ್ತಾವನೆಗಳನ್ನು ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಸಲ್ಲಿಸಿದ ಮೂರು ದಿನದೊಳಗಾಗಿ 0ಕೊಳವೆ ಬಾವಿಗಳನ್ನು ವಿದ್ಯುದ್ದೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ, ಜಲಜೀವನ್ ಮಿಷನ್ ಅಡಿ ಕೊಳವೆಬಾವಿಗಳನ್ನು ಕೊರೆಯಲಾಗಿರುವುದು ಸರಿಯಷ್ಟೆ, ಆದರೆ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ನೀಡಿರುವುದಿಲ್ಲ, ಆದುದರಿಂದ ಸಾರ್ವಜನಿಕ ಉದ್ದೇಶಗಳಿಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅರ್ಜಿ ಬಂದ 3 ದಿನಗಳೊಳಗಾಗಿ ಕೆಲಸ ಆಗಬೇಕು ಎಂದು ಸೂಚಿಸಿದರು.
ಬೋರ್ ವೆಲ್ ಕೊರೆಯುವ ಮಾಲೀಕರು ಸಾರ್ವಜನಿಕ ಉದ್ದೇಶದ ಕೊಳವೆಬಾವಿ ಕೊರೆಯಲು ಪ್ರಥಮಾದ್ಯತೆ ನೀಡಬೇಕು, ತದನಂತರ ಖಾಸಗಿ ಬೋರ್ ವೆಲ್ ಗಳನ್ನು ಕೊರೆಯಬಹುದಾಗಿದೆ, ಉಪ ವಿಭಾಗಾಧಿಕಾರಿಗಳು ಟಾಸ್ಕ್ಫೋರ್ಸ್ ಸಭೆ ನಡೆಸಿ ಸಮರ್ಪಕ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಯಾವುದೇ ಸಬೂಬು ನೀಡಬಾರದು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿರುವ ಬಗ್ಗೆ ವ್ಯಾಪಕವಾಗಿ ಪತ್ರಿಕಾ ಪ್ರಕಟಣೆ ನೀಡುವಂತೆ ಹಾಗೂ ಪೈಪ್ ಲೈನ್ ಹೊಂದಿರುವಂತಹ ಖಾಸಗಿ ಬೋರ್ ವೆಲ್ ಗಳನ್ನು ಗುರುತಿಸಿ ಕುಡಿಯುವ ನೀರು ಪೂರೈಸುವಂತೆ ಸೂಚಿಸಿದರು,
ಕುಡಿಯುವ ನೀರಿನ ಉದ್ದೇಶಗಳಿಗಾಗಿ ಪ್ರತಿ ತಾಲ್ಲೂಕಿಗೆ 85ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಕಂಟಿಂಜೆನ್ಸಿ ಆಕ್ಷನ್ ಪ್ಲಾನ್ ಪ್ರಕಾರ ಟಾಸ್ಕ್ ಫೋರ್ಸ್ ನಲ್ಲಿಟ್ಟು ಚರ್ಚಿಸಿ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜೆಜೆಎಂ ಪ್ರಗತಿ ಬಗ್ಗೆ ಎಸಿ, ತಹಶೀಲ್ದಾರ್ ಮತ್ತು ಇಓಗಳು ಗಮನ ಹರಿಸಬೇಕು, ಆಕ್ಷನ್ ಪ್ಲಾನ್ ಪ್ರಕಾರ ಅನುಮೋದನೆಯಾಗಿರುವ ಕೆಲಸವನ್ನು ಪೂರ್ಣಗೊಳಿಸಬೇಕು, ಇದಕ್ಕೆ ಉಪವಿಭಾಗಾಧಿಕಾರಿಗಳೇ ಸಂಪೂರ್ಣ ಹೊಣೆಯಾಗಿರುತ್ತಾರೆ ಎಂದು ಸೂಚಿಸಿದರು.
ಸಮಗ್ರ ಸ್ವಚ್ಛತೆ ಕಾರ್ಯಕ್ರಮದಡಿ ಏಪ್ರಿಲ್ 21 ಮತಗಟ್ಟೆ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಬೇಕು, ಒಟ್ಟು 250 ಮತಗಟ್ಟೆಗಳನ್ನು ಆಕರ್ಷಕ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಮತಗಟ್ಟೆಗಳು ಆಕರ್ಷಣೀಯವಾಗಿರುವ ಹಾಗೆ ನೋಡಿಕೊಳ್ಳಬೇಕು, ಮತದಾನದ ದಿನದಂದು ಜನರು ಬಿಸಿಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ಬಗ್ಗೆ ಯಾವುದೇ ಛಾಯಾಚಿತ್ರ ಹಾಗೂ ದೂರು ಬರಬಾರದು, ಮತಗಟ್ಟೆ ಆವರಣದೊಳಗಿನ ನಿರೀಕ್ಷಣಾ ಕೊಠಡಿ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ನನ್ನ ನಡೆಮತಗಟ್ಟೆ ಕಡೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯಬೇಕು, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳನ್ನು ಆಯಾ ಮತಗಟ್ಟೆಗಳಲ್ಲಿ ಅಳವಡಿಸಬೇಕು ಮತ್ತು ವೋಟರ್ ಸ್ಲಿಪ್ ಗಳನ್ನು ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Comments are closed.