ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತತ್ತರಿಸುತ್ತಿರುವ ಜನ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲು ಅನುದಾನದ ಕೊರತೆಯಿಲ್ಲ, ಹೊಸ ಕೊಳವೆ ಬಾವಿ ಕೊರೆಯಲು ಸರ್ಕಾರದಿಂದ ಎಲ್ಲಾ ತಾಲ್ಲೂಕಿಗೂ ತಲಾ 8.5 ಲಕ್ಷ ರೂ. ನಂತೆ ಒಟ್ಟು 8.5 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಶಿರಾ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ನರೇಗಾ ಪ್ರಗತಿ, ಚುನಾವಣೆ ಕುರಿತು ಗುರುವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಕುಡಿಯುವ ನೀರಿನ ಯಾವುದೇ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ, ಮೂಲಭೂತ ಸೌಲಭ್ಯಗಳಲ್ಲೊಂದಾದ ಕುಡಿಯುವ ನೀರಿನ ಪೂರೈಕೆ ಮಾಡುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಕಾರಣ ಹೇಳಿ ವಿಳಂಬ ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಹಳೆಯ ಕೊಳವೆಬಾವಿಗಳನ್ನು ಇನ್ನಷ್ಟು ಆಳಕ್ಕೆ ಕೊರೆಯುವ ಮುನ್ನ ನೀರಿನ ಲಭ್ಯತೆ ಬಗ್ಗೆ ಭೂ ವಿಜ್ಞಾನಿಯಿಂದ ತಾಂತ್ರಿಕ ಸಲಹೆ ಪಡೆದ ನಂತರ ಮುಂದಿನ ಕ್ರಮ ವಹಿಸಬೇಕು, ಹುಣಸೆಕಟ್ಟೆ ಗ್ರಾಮ ಹಾಗೂ ನೇರಳೆಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿ ಕೆಲ ಗ್ರಾಮಗಳಲ್ಲಿ ನೀರಿನ ಬವಣೆ ಹೆಚ್ಚಿನ ಪ್ರಮಾಣದಲ್ಲಿ ತಲೆದೋರಿರುವುದರಿಂದ ಹೊಸ ಕೊಳವೆ ಬಾವಿ ಕೊರೆಯಲು ಜಲ ಬಿಂದು ಗುರುತಿಸಬೇಕು, ಅಂತರ್ಜಲ ಇಲಾಖೆ ಅಧಿಕಾರಿ ನಾಗವೇಣಿಯವರಿಗೆ ಸೂಚನೆ ನೀಡಿದರಲ್ಲದೆ, ರಿಗ್ ಯಂತ್ರ ಮಾಲೀಕರು ಸರ್ಕಾರದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆ ಬಾವಿಗಳಿಗೆ ಪ್ರಥಮಾದ್ಯತೆ ನೀಡಬೇಕು, ತಪ್ಪಿದಲ್ಲಿ 7ಎ ನೋಂದಣಿ ರದ್ದುಪಡಿಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿ ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ರಿಗ್ ಯಂತ್ರ ಮಾಲೀಕರ ಗಮನಕ್ಕೆ ತರಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಇಓ ಹನುಮಂತಪ್ಪ, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ದತ್ತಾತ್ರೇಯ ಸೇರಿದಂತೆ ಎಲ್ಲಾ ಪಿಡಿಓಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.