ದಸೂಡಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

57

Get real time updates directly on you device, subscribe now.


ಹುಳಿಯಾರು: ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ಶನಿವಾರ ನೆರವೇರಿತು.
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಯವರ ಧಾರ್ಮಿಕ ಕೈಂಕರ್ಯ ನಡೆಯಿತು, ನಂತರ ಗೌಡಗೆರೆಯ ದುರ್ಗಮ್ಮದೇವರು ಹಾಗೂ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿಕೊಂಡು ಸಕಲ ವಾದ್ಯ ಮೇಳದೊಂದಿಗೆ ದೇವಾಲಯ ಪ್ರದಕ್ಷಿಣೆ ಹಾಕಿ ಬಂದ ನಂತರ ಕೆಂಚರಾಯ ಸ್ವಾಮಿ, ದೂತರಾಯ ಸ್ವಾಮಿ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ರಥದ ಬಳಿ ಕರೆತರಲಾಯಿತು.

ಜೈಕಾರದೊಂದಿಗೆ ಶುಭ ಲಗ್ನದಲ್ಲಿ ಆಂಜನೇಯ ಸ್ವಾಮಿಯವರನ್ನು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು, ರಥದ ಮುಂದೆ ನೆಟ್ಟಿದ್ದ ಕದಳಿ ಮರವನ್ನು ತುಂಡರಿಸಿದ ನಂತರ ಫಲಪುಷ್ಪಾದಿಗಳಿಂದ, ರಂಗಿನ ಬಾವುಟ, ತಳಿರು ತೋರಣಗಳಿಂದ ಸಕಲ ಬಿರುದಾವಳಿಗಳಿಂದ ಅಲಂಕೃತಗೊಂಡ ರಥವನ್ನು ಮಂಗಳವಾದ್ಯ ವೇದ, ಮಂತ್ರ ಘೋಷಗಳ ನಡುವೆ, ಜೈ ಹನುಮಾನ್ ಉದ್ಘೋಷದೊಂದಿಗೆ ಭಕ್ತರು ಎಳೆದು ಪುನೀತರಾದರು.
ಭಕ್ತರು ಅನತಿ ದೂರದಿಂದಲೇ ಬಾಳೆ ಹಣ್ಣನ್ನು ರಥದ ಕಲಶಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು, ಮಹಿಳೆಯರು ರಥದ ಮೇಲಿದ್ದ ಸ್ವಾಮಿಗೆ ಹಣ್ಣುಕಾಯಿ ಮಾಡಿಸುವಲ್ಲಿ ಮುಂದಾಗಿದ್ದರು, ಮೂವತ್ತು ಅಡಿಗೂ ಎತ್ತರದ ಈ ಮಹಾ ರಥೋತ್ಸವ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಬೇಸಿಗೆಯ ಬಿಸಿಲಝಳವನ್ನು ಲೆಕ್ಕಿಸದೆ ದಬ್ಬಗುಂಟೆ, ರಂಗನಕೆರೆ, ಹೊಯ್ಸಳಕಟ್ಟೆ, ಕಲ್ಲೇನಹಳ್ಳಿ, ಮರೆನಡು, ಹುಳಿಯಾರು, ಬೆಳ್ಳಾರ ಸೇರಿದಂತೆ ದಸೂಡಿ ಸುತ್ತಮುತ್ತಲ ಹತ್ತಾರೂ ಹಳ್ಳಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

Get real time updates directly on you device, subscribe now.

Comments are closed.

error: Content is protected !!