ಮಧುಗಿರಿ: ಮೋದಿ ಮೋದಿ ಎಂದು ಅವರ ಹಿಂದೆ ಹೋದರೆ ನಿಮ್ಮಗಳ ಕೆಲಸ ಕಾರ್ಯ ಆಗುವುದಿಲ್ಲ, ನಿಮ್ಮಗಳ ಸ್ಥಳೀಯ ಸಮಸ್ಯೆ ಪರಿಹಾರಕ್ಕಾಗಿ ಎಸ್.ಪಿ.ಮುದ್ದಹನುಮೇ ಗೌಡ ಅವರನ್ನು ಬೆಂಬಲಿಸಿ ಎಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಮಿಡಿಗೇಶಿ ಹಾಗೂ ಐ.ಡಿ.ಹಳ್ಳಿ ಹೋಬಳಿಯ ಗ್ರಾಮಗಳಲ್ಲಿ ಕಾಂಗ್ರೆಸ್ ನ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡರ ಪರವಾಗಿ ಮತ ಯಾಚಿಸಿ ಮಾತನಾಡಿ, ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹುಡುಕಿ ಕೊಂಡು ನೀವು ಹೋಗಬೇಕಾಗಿದೆ, ನಮ್ಮ ಸ್ಥಳೀಯ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಅವರನ್ನು ನೀವು ಮತ್ತೊಮ್ಮೆ ಆಯ್ಕೆ ಮಾಡಿದರೆ ನಿಮ್ಮ ಪರವಾಗಿ ಕೇಂದ್ರದ ಸದನದಲ್ಲಿ ಮಾತನಾಡಿ ಬಗೆಹರಿಸುತ್ತಾರೆ, ಸದಾ ನಿಮ್ಮ ಪರವಾಗಿ ಇರುತ್ತಾರೆ ಎಂದರು.
ತಾಲೂಕಿನ ಅಭಿವೃದ್ಧಿಗೆ ಮುದ್ದಹನುಮೇ ಗೌಡರ ಕೊಡುಗೆಯು ಇದೆ, ಇತ್ತೀಚೆಗೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನನ್ನ ಬಗ್ಗೆ ಹಾಗೂ ಬ್ಯಾಂಕ್ ನ ಬಗ್ಗೆ ಮಾತನಾಡಿ ಹೋಗಿದ್ದಾರೆ, ಅವರು ಹೇಳಿರುವಂತೆ ನಾವು ರೌಡಿಸಂ ಮಾಡುತ್ತಿದ್ದೇವಾ, ಬ್ಯಾಂಕ್ ಗೆ ಬಂದವರಿಗೆಲ್ಲಾ ಸಾಲ ಕೊಟ್ಟಿದ್ದೇವೆ, ಕುಮಾರಸ್ವಾಮಿ ಹೇಳಿಕೆಗೆ ವಿರೋಧವಾಗಿ ನಮ್ಮ ಅಭ್ಯರ್ಥಿ ಪರವಾಗಿ ಹೆಚ್ಚು ಮತ ನೀಡಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಬೇಕು, ವಿರೋಧಿಗಳ ಅಪ ಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ, ನಮ್ಮ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ನೀಡಿರುವ ಗ್ಯಾರಂಟಿ ಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತ ಗೊಳಿಸುವುದಿಲ್ಲ, ಚುನಾವಣೆಯ ನಂತರವು ಮುಂದುವರೆಯಲಿವೆ ಎಂದರು.
ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಮಾತನಾಡಿ, ನಾನು ಈ ಹಿಂದೆ ಸಂಸತ್ ನಲ್ಲಿ ನಮ್ಮ ರಾಜ್ಯದ ಹಾಗೂ ಜಿಲ್ಲೆಯ ಜಲ್ವಂತ ಸಮಸ್ಯೆ ಗಳ ಬಗ್ಗೆ ಮಾತನಾಡಿದ್ದೆ, ಮೇಕೆದಾಟು, ಮಹಾದಾಯಿ ನದಿ ನೀರಿನ ವಿಚಾರ ಹಾಗೂ ರೈತರ, ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ ಎಂದರು.
ಬಿಜೆಪಿ ಅಭ್ಯರ್ಥಿ ಒಂದೇ ವರ್ಷದಲ್ಲಿ ಮೂರು ಚುನಾವಣೆ ಎದುರಿಸಿದ್ದಾರೆ, ಇವರ ಆರ್ಥಿಕ ಶಕ್ತಿ ಹೆಚ್ಚಾಗಿರ ಬೇಕು, ಒಮ್ಮೆ ಇವರ ಮನಸ್ಥಿತಿ ನೀವುಗಳೆ ಅರ್ಥೈಸಿಕೊಳ್ಳಬೇಕು, ನನ್ನ ಪ್ರಶ್ನೆ ಇಷ್ಟೇ, ವಿ.ಸೋಮಣ್ಣನವರೆ ನೀವು ಜಿಲ್ಲೆಯ ಅಳಿಯನಾ, ಮನೆ ಮಗನಾ?, ಮೊಮ್ಮಗ ಅಥವಾ ಜಿಲ್ಲೆಯಲ್ಲಿ ಎಲ್ಲಿಯಾದರೂ ನಾಲ್ಕು ಎಕರೆ ಜಮೀನು ಹೊಂದಿದ್ದೀರಾ, ಜಿಲ್ಲೆಯ ರೈತರಾಗಿದ್ದೀರಾ, ಏನು ಸಂಬಂಧ ಇದೆ ಹೇಳಿ, ನಿಮ್ಮಂತಹ ಅಲೆಮಾರಿ ರಾಜಕಾರಣಿಗೆ ತುಮಕೂರಿನಲ್ಲಿನ ಜನರ ಬಳಿ ಮತ ಕೇಳುವ ಹಕ್ಕು ನಿಮಗಿದೆಯೇ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಮುಖಂಡರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಜಿ.ಜೆ.ರಾಜಣ್ಣ , ಗೋಪಾಲಯ್ಯ, ಸದಾಶಿವರೆಡ್ಡಿ, ಕುಳ್ಳರಂಗಪ್ಪ, ಪಿ.ಟಿ.ಗೋವಿಂದಯ್ಯ, ತಾಡಿ ಶಿವರಾಂ, ಶನಿವಾರಂ ರೆಡ್ಡಿ ಇತರರು ಇದ್ದರು.
Comments are closed.