ಬಿಟ್ಟಿ ಭಾಗ್ಯಗಳಿಗೆ ಮಾರು ಹೋಗಬೇಡಿ: ಪ್ರತಾಪ್ ಸಿಂಹ

23

Get real time updates directly on you device, subscribe now.


ಮಧುಗಿರಿ: ಜನತೆ ಬಿಟ್ಟಿ ಭಾಗ್ಯಗಳಿಗೆ ಮಾರು ಹೋಗಬೇಡಿ, ದೇಶಾದ್ಯಂತ ಮೋದಿಜಿಯವರ ಅಲೆಯಿಂದ ಅವರು 3 ನೇ ಬಾರಿಯೂ ಪ್ರಧಾನಿಯಾಗಿ ಆಯ್ಕೆಯಾಗಲಿದ್ದು, ದೇಶದ ಅಭಿವೃದ್ದಿಯ ಜೊತೆಗೆ ವಿಶ್ವಗುರುವಾಗಿ ಜಗತ್ತಿಗೆ ನಾಯಕರಾಗಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಪಟ್ಟಣದ ಕುಂಚಿಟಿಗ ಒಕ್ಕಲಿಗ ಸಮುದಾಯ ಭವನದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಯುವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಅಮೆರಿಕಾ, ಬ್ರಿಟನ್, ರಷ್ಯಾ ದೇಶದ ನಾಯಕರು ಹೇಳಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೇಳಬೇಕಿತ್ತು, ಆದರೆ ಈಗ ಟ್ರೆಂಡ್ ಬದಲಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಎಲ್ಲಾ ರಾಷ್ಟ್ರಗಳೂ ತಲೆದೂಗುತ್ತಿದ್ದು, ಅವರು ವಿಶ್ವ ಗುರುವಾಗಿ ಹೊರಹೊಮ್ಮಿದ್ದಾರೆ ಎಂದರು.

ಕೋವಿಡ್ ಸಂಕಷ್ಟದಲ್ಲಿ ದೇಶದ ಜನತೆಯ ನೆರವಿಗೆ ದಾವಿಸಿ ಜೀವ ಕಾಪಾಡಿದವರು ಪ್ರಧಾನಿ ನರೇಂದ್ರ ಮೋದಿ, ಇದು ದೇಶದ ಭದ್ರತೆ ಮತ್ತು ಅಭಿವೃದ್ಧಿಯ ಚುನಾವಣೆಯಾಗಿದ್ದು, ರಾಜ್ಯದ ಎಲ್ಲಾ ಕ್ರೇತ್ರಗಳಲ್ಲೂ ಬೆಜೆಪಿ ಅಲೆ ಕಂಡು ಬರುತ್ತಿದೆ, ಎಲ್ಲೆಡೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಜನತೆ ಬಿಟ್ಟಿ ಭಾಗ್ಯಗಳಿಗೆ ಮಾರು ಹೋಗದೇ ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ ಎಂದರು.

ತುಮಕೂರು ಜಿಲ್ಲೆಯಲ್ಲಿ ಸೋಮಣ್ಣ ಸಂಸದರಾಗಿ ಆಯ್ಕೆಯಾದರೆ ಕೇಂದ್ರ ಸಚಿವರಾಗಲಿದ್ದು, ಒಂದು ವರ್ಷದಲ್ಲಿ ತುಮಕೂರಿನ ಚಿತ್ರಣವೇ ಬದಲಾಗಲಿದೆ, ತುಮಕೂರಿನಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಯಾಗಲಿದೆ, ಅವರು ಸಚಿವರಾದರೆ ನಾನು ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ತುಮಕೂರಿನ ಸಿದ್ದಗಂಗಾ ಕ್ಷೇತ್ರದ ಶಿವಕುಮಾರ ಸ್ವಾಮೀಜಿ ಹಾಗೂ ಬಾಲಗಂಗಾಧರ ನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದ ಸೋಮಣ್ಣನವರು ಅವರ ಮಾನಸ ಪುತ್ರರಾಗಿ ಗುರುತಿಸಿಕೊಂಡಿದ್ದರು, ಗ್ಯಾರಂಟಿ ಸ್ಕಿಂಗಳು ಜನತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇದು ದೇಶದ ಚುನಾವಣೆಯಾಗಿರುವುದರಿಂದ ರಾಜ್ಯದ 28 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದ್ದೇವೆ, ಜಿಲ್ಲೆಯಲ್ಲಿ ಸೋಮಣ್ಣನವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಮಧುಗಿರಿ ಬಿಜೆಪಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇ ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಸ್ವಾಮಿ, ಮುಖಂಡರಾದ ವೀರೇಂದ್ರ, ಪುರಸಭಾ ಸದಸ್ಯರಾದ ತಿಮ್ಮರಾಜು ಚಂದ್ರಶೇಖರ್ ಬಾಬು, ರಮೇಶ, ಸುರೇಶ್ ಚಂದ್ರ, ಮಧುಗಿರಿ ಮಂಡಲ ಅಧ್ಯಕ್ಷ ನಾಗೇಂದ್ರ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!