ತುಮಕೂರು ವಿವಿಯಿಂದ ಮತದಾನ ಜಾಗೃತಿ

23

Get real time updates directly on you device, subscribe now.


ತುಮಕೂರು: ತುಮಕೂರು ನಗರದಲ್ಲಿ ಮಹಿಳೆಯರ ಜನಸಂಖ್ಯೆ ಶೇ.52 ರಷ್ಟಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ತಿಳಿಸಿದರು.
ತುಮಕೂರು ವಿವಿಯು ಜಿಲ್ಲಾಡಳಿತ, ಜಿಲ್ಲಾಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿರುವ 2.67 ಲಕ್ಷ ಜನಸಂಖ್ಯೆಯಲ್ಲಿ 1.37 ಲಕ್ಷ ಮಂದಿ ಮಹಿಳೆಯರಿದ್ದಾರೆ, ಮತದಾನದ ಹಕ್ಕನ್ನು ಇವರೆಲ್ಲರೂ ಚಲಾಯಿಸಬೇಕು ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ನಾಗರಿಕರೆಲ್ಲರೂ ಮತದಾನ ಮಾಡುವಂತೆ ಮತದಾನ ಜಾಗೃತಿ ಅಭಿಯಾನಗಳನ್ನು ಜಿಲ್ಲೆ, ತಾಲೂಕು ಕೇಂದ್ರಗಳು, ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ, ಶಿಕ್ಷಕರ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನ ಕುರಿತ ಜಾಗೃತಿ ಮೂಡಿಸುವಲ್ಲಿ ಶೇ.100 ರಷ್ಟು ಸಫಲರಾಗಿದ್ದೇವೆ ಎಂದರು.

ಏ.26 ಮತದಾನ ದಿನದಂದು ಮತಗಟ್ಟೆಯ ಬಳಿ ಮತದಾನ ಮಾಡುವವರಿಗೆ ಸಹಾಯವಾಗಲು ಇಚ್ಛೆಯಿಂದ ಕೆಲಸ ಮಾಡುವ ಸ್ವಯಂ ಸೇವಕರು ಬರಬಹುದು, ಹಿರಿಯ ನಾಗರಿಕರಿಗೆ ಮತಗಟ್ಟೆಗೆ ಬರಲು ಆಟೋ ವ್ಯವಸ್ಥೆ ಕಲ್ಪಿಸಲಾಗಿದೆ, ಮತದಾರರ ಗುರುತಿನ ಚೀಟಿ ಇರುವ ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯ ಸಫಲವಾಗಬೇಕಾದರೆ ಮತದಾನ ಮಾಡಬೇಕು ಎಂದರು.

ಮತದಾನ ಮಾಡುತ್ತೇವೆ, ಮತದಾನ ಮಾಡಲು ಪ್ರೇರೇಪಿಸುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು.
ತುಮಕೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಯ ಬೋಧಕ- ಬೋಧಕೇತರ ಸಿಬ್ಬಂದಿ, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!