ತುಮಕೂರು: ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ನಡೆಯುವ ಮತದಾನ ಕಾರ್ಯಕ್ಕಾಗಿ ನಿಯೋಜಿತ ಮತಗಟ್ಟೆ ಸಿಬ್ಬಂದಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಚುನಾವಣಾ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 546 ಸೂಕ್ಷ್ಮ ಮತಗಟ್ಟೆ ಸೇರಿ 2618 ಮತಗಟ್ಟೆಗಳಿದ್ದು ಸುಮಾರು 16700 ಸಿಬ್ಬಂದಿ ಮತದಾನ ಕಾರ್ಯಕ್ಕೆ ನಿಯೋಜಿಸಲಾಗಿದೆ, ಯಾವುದೇ ದೂರು ಬಾರದಂತೆ ನಿಯೋಜಿತ ಮತಗಟ್ಟೆ ಸಿಬ್ಬಂದಿಗೆ ಮತದಾನ ದಿನದಂದು ತಿಂಡಿ, ಊಟದ ವ್ಯವಸ್ಥೆ ಮಾಡಬೇಕೆಂದು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಎಲ್ಲಾ ಮತಗಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಊಟ ಒದಗಿಸುವುದರೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ನೇಮಕವಾಗುವ ಪೊಲೀಸ್, ಸಿಆರ್ಪಿಎಫ್, ಕೆ ಎಸ್ ಆರ್ ಪಿ, ಪ್ಯಾರಾ ಮಿಲಿಟರಿ ಸೇರಿದಂತೆ ಭದ್ರತಾ ಸಿಬ್ಬಂದಿಗೂ ಭೋಜನದ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಪ್ರಭು ಮಾತನಾಡಿ ನೆರಳಿನ ವ್ಯವಸ್ಥೆ ಇಲ್ಲದಿರುವ 589 ಮತಗಟ್ಟೆಗಳಿಗೆ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ, ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮತದಾನದ ಬ್ಯಾನರ್ ಆಳವಡಿಸಲಾಗಿದೆ, ಮತದಾನ ಮಾಡಲು ಆಗಮಿಸುವ ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮತಗಟ್ಟೆಗಳಿಗೆ ಕರೆದೊಯ್ಯಲು ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮತದಾನ ನಡೆಯಲಿರುವ ಮತಗಟ್ಟೆಗಳನ್ನು ತಳಿರು- ತೋರಣ, ರಂಗೋಲಿಯಿಂದ ಅಲಂಕರಿಸಿ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಬೇಕೆಂದು ಡಿಡಿಪಿಐ ರಂಗಧಾಮಯ್ಯ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಚುನಾವಣಾ ತಹಶೀಲ್ದಾರ್ ರೇಷ್ಮ ಸೇರಿದಂತೆ ಮತ್ತಿತರ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.
Comments are closed.