ಕುಣಿಗಲ್: ತಾಲೂಕಿನ ಜನತೆಯ ನಿರಂತರ ಸಂಪರ್ಕದಲ್ಲಿದ್ದು ಕೊವಿಡ್ ಸೇರಿದಂತೆ ಕಷ್ಟ ಕಾಲದಲ್ಲಿ ಜನರ ಸೇವೆ ಮಾಡಿದ್ದು ಸಂಸದ ಡಿ.ಕೆ.ಸುರೇಶ್ ಹೊರತು ಹಾಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಮಂಜುನಾಥ ಅಲ್ಲ ಎಂಬುದ ಜನ ಮರೆಯಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಮತಯಾಚನೆ ಮಾಡಿ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಆಗಲಿ ನಾನಾಗಲಿ, ಶಾಸಕ ಡಾ.ರಂಗನಾಥ್ ಆಗಲಿ ಈ ಕ್ಷೇತ್ರಕ್ಕೆ ನೀಡಿದ ಭರವಸೆಯಂತೆ ಕೆಲಸ ಮಾಡಿದ್ದೇವೆ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ, ಕೆಲಸ ಮಾಡಿ ಕೂಲಿ ರೂಪದಲ್ಲಿ ಮತ ಕೇಳುತ್ತಿದ್ದೇವೆ, ಮತ ನೀಡಿ ಆಶೀರ್ವದಿಸಿ, ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಅನ್ಯಾಯದ ಬಗ್ಗೆ ಇಡೀ ರಾಜ್ಯದ ಯಾವುದೆ ಸಂಸದ ಧ್ವನಿ ಎತ್ತದ ಸಮಯದಲ್ಲಿ ರಾಜ್ಯದ ಕನ್ನಡಿಗರ ಪಾಲಿನ ತೆರಿಗೆ ಹಕ್ಕು ಮಂಡಿಸಿದ್ದು ಸಂಸದ ಡಿ.ಕೆ.ಸುರೇಶ್ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ನ ದೇವೆಗೌಡರು, ಅವರ ಮಗ ಆಯಿತು, ಸೊಸೆ ಆಯಿತು ಈಗ ಅಳಿಯನನ್ನು ಬೆಜಿಪಿ ಯಿಂದ ನಿಲ್ಲಿಸಿದ್ದಾರೆ, ಇವರು ಕ್ಷೇತ್ರಕ್ಕೆ ಬರುತ್ತಾರಾ, ಜನರೊಂದಿಗೆ ಬೆರೆಯುತ್ತಾರಾ ಅನ್ನೋದು ಜನ ಯೋಚಿಸಬೇಕು, ಕುಮಾರ ಸ್ವಾಮಿ ಸಂಸದರಾಗಿದ್ದಾಗ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ, ಈಗ ಮನೆ ಅಳಿಯನ ಗೆಲ್ಲಿಸಲು ಕ್ಷೇತ್ರಕ್ಕೆ ಬಂದಿದ್ದಾರೆ, ಚುನಾವಣೆ ನಂತರ ಜೆಡಿಎಸ್ ಪಕ್ಷ ಇರುವುದಿಲ್ಲ, ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಆಹ್ವಾನ ನೀಡಿದರು.
ಡಿಸಿಎಂ ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ ಸಚಿವ ಜಮೀರ್ ಅಹಮದ್ ಖಾನ್, ಅಲ್ಪಸಂಖ್ಯಾತ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿ ಈ ಬಾರಿ ಲೋಕಸಭೆ ಚುನಾವಣೆ ಸಂವಿಧಾನ ಉಳಿಸುವ ಚುನಾವಣೆಯಾಗಿದ್ದು, ಅಲ್ಪ ಸಂಖ್ಯಾತ ಸಮುದಾಯದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ರಕ್ಷಣೆಗೆ ಸದಾ ಬದ್ದವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಶಾಸಕ ಡಾ.ರಂಗನಾಥ್, ಚಿತ್ರನಟ ಸಾಧುಕೋಕಿಲ ಇತರರು ಇದ್ದರು.
Comments are closed.