ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

28

Get real time updates directly on you device, subscribe now.


ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯವಾಗಿದ್ದು, ಸಂವಿಧಾನ ಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ತಪ್ಪದೆ ಚಲಾಯಿಸಬೇಕೆಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್.ಸುಕನ್ಯ ಕರೆ ನೀಡಿದರು.
ಉಪ್ಪಾರಹಳ್ಳಿ ಸರ್ಕಲ್ನಿಂದ ಜನಶಿಕ್ಷಣ ಸಂಸ್ಥೆ, ವರದಕ್ಷಿಣೆ ವಿರೋಧಿ ವೇದಿಕೆ, ನಗರ ಸಾಂತ್ವನ ಕೇಂದ್ರ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರಂಭಿಸಲಾದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವಂತೆ ಕರೆ ನೀಡಿದರು.

ಮತದಾನ ಒಂದು ಪವಿತ್ರ ಹಕ್ಕಾಗಿರುವ ಕಾರಣ ಯಾರ ಮಾತಿಗೂ, ಯಾವ ಪ್ರಲೋಬನೆಗೂ ಒಳಗಾಗಬಾರದು, ಅಭಿವೃದ್ಧಿಯ ಚಿಂತನೆ ಹೊಂದಿರುವ ಅಭ್ಯರ್ಥಿಯನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು, ಮತ ಹಾಕಲು ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ, ಇದು ಪ್ರತಿಯೊಬ್ಬ ಪ್ರಜೆಯ ಹಕ್ಕೂ ಕೂಡ, ತಮಗೆ ಯಾರಿಗೆ ಮತ ಹಾಕಬೇಕು ಅನ್ನಿಸುವುದೋ ಅಂತಹವರಿಗೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ಹಕ್ಕನ್ನು ನಾವೇ ಗೌರವಿಸಿಕೊಳ್ಳಬೇಕಾಗಿದೆ ಎಂದರು.

ತುಮಕೂರು ನಗರ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಜನ ಚುನಾವಣೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ, ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ ನಗರ ಪ್ರದೇಶದಲ್ಲಿ ಕೆಲವರು ಮತದಾನ ಮಾಡಲು ಹಿಂಜರಿಯುತ್ತಾರೆ, ಅಭ್ಯರ್ಥಿಗಳು ಯಾರೇ ಆಗಲಿ ಪ್ರಜೆಗಳ ಹಿತಾಸಕ್ತಿ ಬಯಸುವ ವ್ಯಕ್ತಿಗಳನ್ನು ಗಮನಿಸಿ ಓಟು ಹಾಕಲು ಅವಕಾಶವಿದೆ, ಇಂತಹ ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದರು.

18 ವರ್ಷ ಪೂರೈಸಿರುವ ಪ್ರತಿಯೊಬ್ಬರೂ ನಮ್ಮ ಚುನಾವಣೆಗಳಲ್ಲಿ ಭಾಗವಹಿಸುವ ಅವಕಾಶವಿದೆ, ಅವರಿಗೆ ಮತದಾನದ ಹಕ್ಕಿನ ಬಗ್ಗೆ ತಿಳಿ ಹೇಳಬೇಕು, ಮತದಾನದ ದಿನದಂದು ನಿಗದಿತ ಅವಧಿಯಲ್ಲಿ ಎಲ್ಲರೂ ತಮ್ಮ ತಮ್ಮ ಮತ ಕೇಂದ್ರಗಳಿಗೆ ತೆರಳಿ ಓಟು ಹಾಕುವಂತೆ ತಿಳಿ ಹೇಳಬೇಕು ಎಂದರು.

ವಿದ್ಯಾರ್ಥಿನಿ ಸಿಂಚನ ಮಾತನಾಡಿ, ಯುವ ಜನತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು, ತಮ್ಮ ಕೆಲಸ ಕಾರ್ಯಗಳು ಏನೇ ಇದ್ದರೂ ಅದನ್ನು ಬದಿಗೊತ್ತಿ ಮತದಾನದ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಉತ್ತಮರನ್ನು ಆಯ್ಕೆ ಮಾಡಬೇಕು ಎಂದರು.
ಲೇಖಕಿ ಕಮಲಾ ರಾಜೇಶ್, ವರದಕ್ಷಿಣೆ ವಿರೋಧಿ ವೇದಿಕೆಯ ಗಂಗಲಕ್ಷ್ಮಿ, ಸಾಂತ್ವಾನ ಕೇಂದ್ರದ ಯುವರಾಣಿ, ನೀಲಮ್ಮ, ಸಾಯಿಬಾಬಾ ಕಂಪ್ಯೂಟರ್ ನ ವೇದಾ, ಸುಜಾತ, ಗೀತಾ ಮತ್ತಿತರರು ಮಾತನಾಡಿದರು.

Get real time updates directly on you device, subscribe now.

Comments are closed.

error: Content is protected !!