ಕುಣಿಗಲ್: ತೆಪ್ಪಸಂದ್ರ ಗ್ರಾಮದ ದೇವರ ಉತ್ಸವಕ್ಕೆ ತಹಶೀಲ್ದಾರ್ ಅನುಮತಿ ನೀಡಿದ್ದರೂ ಕೆಳ ಹಂತದ ಅಧಿಕಾರಿಗಳು ಹಬ್ಬ ನಿಲ್ಲಿಸುವಂತೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಬುಧವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ನಡೆಖಂಡಿಸಿದರು.
ತಾಲೂಕಿನ ಕಸಬಾ ಹೋಬಳಿಯ ತೆಪ್ಪಸಂದ್ರ ಗ್ರಾಮದ ಮುಖಂಡರಾದ ನಾಗರಾಜ್ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಕಂದಾಯ ಇಲಾಖಾಧಿಕಾರಿಗಳ ನಡೆ ಖಂಡಿಸಿ ಘೋಷಣೆ ಕೂಗಿದರು, ಮುಖಂಡ ದೇವರಾಜ್ ಮಾತನಾಡಿ, ನರಸಿಂಹ ಸ್ವಾಮಿ ದೇವಸ್ಥಾನದ ಉತ್ಸವ ಜನವರಿ ಹನ್ನೊಂದರಿಂದ ಮೇ 20 ನೇ ತಾರಿಕಿನ ವರೆಗೂ ನಡೆಸಲು, ತಹಶೀಲ್ದಾರ್ ವಶದಲ್ಲಿದ್ದ ದೇವರ ಉತ್ಸವಮೂರ್ತಿಗಳನ್ನು ತೆಗೆದುಕೊಂಡು ಹೋಗಲು ತಹಶೀಲ್ದಾರ್ ಅನಮತಿ ನೀಡಿದ್ದರು, ಈ ಮಧ್ಯೆ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಪರಮೇಶ್ವರ್, ಗ್ರಾಮಾಡಳಿತಾಧಿಕಾರಿ ಪವಿತ್ರ, ಮುಜರಾಯಿ ವಿಭಾಗದ ನಾಗಮ್ಮ ಎಂಬುವರು ಕರೆ ಮಾಡಿ ಏಪ್ರಿಲ್ 27 ರಂದು ದೇವಾಲಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವರ ದೊಡ್ಡ ಹರಿಸೇವೆ ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಡ ಹಾಕುತ್ತಿದ್ದಲ್ಲದೆ, ಉತ್ಸವಮೂರ್ತಿ ವಾಪಸ್ ನೀಡುವಂತೆ ಹೇಳುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ಬಾರದೆ ನಿಯಮಾನುಸಾರ ಹುಂಡಿ ಹೊಡೆದು ಹಣ ತೆಗೆದುಕೊಂಡು ಹೋಗಿಲ್ಲ ಎಂದು ಅರೋಪಿಸಿದರು.
ದೇವಾಲಯ ಸಮಿತಿಯ ಪ್ರಮುಖರಾದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಆಗಮಿಸಿ ತಹಶೀಲ್ದಾರ್ ಭೇಟಿ ಮಾಡಿ ಸಮಸ್ಯೆ ಗಮನಕ್ಕೆ ತಂದರು, ತಹಶೀಲ್ದಾರ್ ವಿಶ್ವನಾಥ್ ಅನುಮತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಉತ್ಸವ ನಡೆಯಲಿ ಎಂದು ಅನುಮತಿಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಹಬ್ಬಾಚರಣೆ ಸಿದ್ಧತೆ ಮಾಡಿಕೊಳ್ಳುವಂತೆ, ಹುಂಡಿ ಹಣದ ಬಗ್ಗೆ ಸರ್ಕಾರಕ್ಕೆ ಜಮೆಯಾಗಿದ್ದು ನಿಯಮ ಉಲ್ಲಂಘನೆ ಆಗಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಮುಖರಾದ ಕೃಷ್ಣಯ್ಯ, ಗಂಗನರಸಯಯ್ಯ, ರಾಮಚಂದ್ರಯ್ಯ, ನರಸಿಂಹಯ್ಯ, ರಾಮಾನುಜಯ್ಯ, ಮಾಸ್ತಿಗೌಡ, ರಾಮಣ್ಣ, ಲಕ್ಷ್ಮೀದೇವಿ, ಗೌರಮ್ಮ, ಲಕ್ಷ್ಮಮ್ಮ, ನಿಂಗಮ್ಮ, ವೀರಮ್ಮ ಇತರರು ಇದ್ದರು.
Comments are closed.