ಕುಣಿಗಲ್: ತಾಲೂಕಿನ ಕಿಚ್ಚವಾಡಿ ಗ್ರಾಮದಲ್ಲಿ ವಾಟರ್ ಮನ್ ಸಾವಿನ ಹಿಂದೆ ರಾಜಕೀಯ ಕಾರಣ ಇದ್ದು ಆರೋಪಿಗಳನ್ನು ಬಂಧಿಸದೆ ಇದ್ದರೆ ಹುಲಿಯೂರು ದುರ್ಗ ಪೊಲೀಸ್ಠಾಣೆ ಹಾಗೂ ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬೆಂಗಳುರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಹೇಳಿದರು.
ಶನಿವಾರ ಹುಲಿಯೂರು ದುರ್ಗ ಹೋಬಳಿಯ ಕಿಚ್ಚವಾಡಿ ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೃತ ವಾಟರ್ ಮನ್ ಚಂದ್ರಯ್ಯ (ಚಂದ್ರಶೇಖರ) ನ ಮಕ್ಕಳು ಬಿಜೆಪಿ ಕಾರ್ಯಕರ್ತರಾಗಿದ್ದು, ಗ್ರಾಮದಲ್ಲಿ ಪಕ್ಷದ ಪ್ರಚಾರ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಚಂದ್ರಯ್ಯನಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರಿಂದ ಆತ ನೀರಿನ ಟ್ಯಾಂಕ್ ಗೆ ನೇಣು ಬಿಗಿದು ಮೃತಪಟ್ಟಿದ್ದಾನೆ, ಆತನ ಮೇಲೆ ಹಲ್ಲೆ ನಡೆಸಿ, ಮಾನಸಿಕ ಹಿಂಸೆ ನೀಡಿ ನೇಣು ಬಿಗಿದು ಸಾಯಲು ಪ್ರಚೋದನೆ ನೀಡಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದ್ದರೂ ಸ್ಥಳೀಯ ಪೊಲೀಸರು ಅವರನ್ನು ಬಂಧಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಆರೋಪಿಗಳು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡುತ್ತಾ ಮೃತನ ಕುಟುಂಬದವರಿಗೆ ಪುನಹ ಬೆದರಿಕೆ ಹಾಕುತ್ತಿದ್ದಾರೆ, ಪೊಲೀಸರು ನಿಷ್ಪಕ್ಷ ಪಾತವಾಗಿ ಕ್ರಮ ಜರುಗಿಸಬೇಕಿದ್ದು ಈ ಪ್ರಕರಣದಲ್ಲಿ ಸಮರ್ಪಕ ಕ್ರಮ ಕೈಗೊಳ್ಳದ ಕಾರಣ ಘಟನೆ ಸಂಬಂಧ ಇಲಾಖೆಯ ಐಜಿಯೊಂದಿಗೆ ಮಾತನಾಡಿದ್ದು ಮೂರು ದಿನದೊಳಗೆ ಕ್ರಮವಾಗದೆ ಇದ್ದಲ್ಲಿ ಅಗತ್ಯ ಕ್ರಮಕ್ಕೆ ಪ್ರತಿಭಟನೆ ಸೇರಿದಂತೆ ಹೋರಾಟ ನಡೆಸುವುದು ಅಗತ್ಯವಾಗುತ್ತದೆ ಎಂದರು.
ತಾಲೂಕಿನಲ್ಲಿ ಚುನಾವಣೆ ಸಂಬಂಧ ಇದು ಸೇರಿ ಮೂರು ಘಟನೆಗಳು ನಡೆದಿದ್ದು ಪೊಲೀಸರ ಕ್ರಮ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಪಕ್ಷವೂ ಮೃತನ ಕುಟುಂಬದೊಂದಿಗೆ ಸದಾ ಇದ್ದು ಅಗತ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸಂಸದರ ಕುಮ್ಮಕ್ಕಿನಿಂದ ಹೊಡಿ ಬಡಿ ಸಂಸ್ಕೃತಿ ಹೆಚ್ಚುತ್ತಿದ್ದು ಪೊಲೀಸರು ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ, ಪೊಲೀಸರಿಗೆ ಈ ನಿಟ್ಟಿನಲ್ಲಿ ಹಲವಾರು ಬಾರಿ ತಿಳಿಸಿದ್ದರೂ ಭಾದಿತರಿಗೆ ರಕ್ಷಣೆ ಸಿಗುತ್ತಿಲ್ಲ, ಇನ್ನಾದರೂ ಎಚ್ಚೆತುಕೊಳ್ಳಬೇಕು ಎಂದರು.
Comments are closed.