ಅಗ್ನಿ ಅವಘಡ- ಕುಟುಂಬಸ್ಥರಿಗೆ ಮನೆ: ಪರಂ ಭರವಸೆ

41

Get real time updates directly on you device, subscribe now.


ಕೊರಟಗೆರೆ: ಆಕಸ್ಮಿಕ ಅಗ್ನಿ ಅವಘಡದಿಂದ ಕಳೆದ 2 ದಿನದ ಹಿಂದೆಯಷ್ಟೇ ಸುಮಾರು 10 ಗುಡಿಸಲಿಗೆ ಬೆಂಕಿ ಬಿದ್ದು ದಿನ ಬಳಕೆ ವಸ್ತಗಳು ಸೇರಿದಂತೆ ಇತರೆ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ, ಈ ಘಟನೆಯಿಂದ ಬಡ ಕುಟುಂಬಗಳಿಗೆ ಸಂಪೂರ್ಣ ನಷ್ಟ ಉಂಟಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ವಿಷಾಧ ವ್ಯಕ್ತಪಡಿಸಿದರು.
ತಾಲೂಕಿನ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಡ ಕುಟುಂಬಗಳಿಗೆ ಸಾಂತ್ವನ ತಿಳಿಸಿದ ಬಳಿಕ ಮಾತನಾಡಿ, 2 ವರ್ಷದ ಹಿಂದೆಯೂ ಇದೇ ರೀತಿ ಘಟನೆ ನಡೆದಿತ್ತು, ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಅಧಿಕಾರಿಗಳಿಗೆ ಮನೆ ನಿರ್ಮಿಸಿ ಕೊಡುವಂತೆ ತಿಳಿಸಿದ್ದೆ, ಮತ್ತೆ ಈ ಘಟನೆ ಮರು ಕಳಿಸಿದೆ, ಸರ್ಕಾರಿ ಜಮೀನಿನ 9.32 ಗುಂಟೆ ಜಮೀನಿನಲ್ಲಿ ಪಶು ಆಸ್ಪತ್ರೆ ಮತ್ತು ಸರ್ಕಾರಿ ಶಾಲೆಗೆ ಸ್ಥಳ ವಿಂಗಡಣೆ ಮಾಡಿ ಲೇಔಟ್ ಆದ ನಂತರ ಕುಟುಂಬಗಳಿಗೆ ಆಶ್ರಯದ ವ್ಯವಸ್ಥೆ ಮಾಡಲಾಗುವುದು.

ಗುಡಿಸಲು ಮನೆಗಳಿಗೆ ಮತ್ತು ಊರಿನಲ್ಲಿ ವಾಸಿಸುತ್ತಿರುವ ಮನೆಗಳಲ್ಲಿ 60 ರಿಂದ 70 ಕುಟುಂಬಕ್ಕೆ ಸ್ವಂತ ನಿವೇಶನವಿಲ್ಲವೆಂದು ಮಾಹಿತಿ ಬಂದಿದೆ, ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಕೆಲಸ ಪ್ರಾರಂಭವಾಗುತ್ತದೆ, ಸರ್ಕಾರದ ಆಶ್ರಯ ಯೋಜನೆಯಡಿ ಮನೆಗಳಲ್ಲಿ ಇಲ್ಲಿನ 21 ಕುಟುಂಬಗಳಿಗೆ ಸೌಲಭ್ಯ ಸಿಗುವಂತೆ ಮಾಡಿ, ಉಳಿದ ಕುಟುಂಬಕ್ಕೆ ಸ್ಥಳ ವಿಂಗಡಣೆ ಮಾಡಿ ಸರ್ಕಾರದ ಆಯಾ ಸುಮುದಾಯಗಳಿಗೆ ಸೇರಿದ ನಿಗಮದಿಂದ ಮನೆ ಕಟ್ಟಿಸಿ ಕೊಡಲು ಏರ್ಪಾಡು ಮಾಡಲಾಗುವುದು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ರಸ್ತೆಯ ಸಮಸ್ಯೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಹಿರಿಯರ ಕಾಲದಲ್ಲಿ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿ ಕಾಣುತ್ತಿತ್ತು, ದಿನಮಾನ ಕಳೆಯುತ್ತಿರುವುದರಿಂದ ಅವಿಭಕ್ತ ಕುಟುಂಬಗಳಲ್ಲಿ ಬದಲಾವಣೆ ಕಂಡುಬರುತ್ತಿರುವುದರಿಂದ ಹಿಂದೂ ಸಮಾಜದಲ್ಲಿ ಇಂತಹ ಸಮಸ್ಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ, ಆದರೆ ಹಲವು ಕಡೆ ಖಾಲಿ ಇರುವ ಸರ್ಕಾರಿ ಜಮೀನುಗಳಲ್ಲಿ ಗುಡಿಸಿಲು ಹಾಕಿಕೊಂಡರೆ ನಿವೇಶನ ನೀಡುತ್ತಾರೆ ಎನ್ನುವ ಮನೋಭಾವ ಹಲವರಲ್ಲಿ ಬಂದಿದ್ದು ಇದಕ್ಕೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು ಇವುಗಳು ಊರ್ಜಿತವಾಗುವುದಿಲ್ಲ, ನಮ್ಮ ಆಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಸ್ಥಳ ಪರಿಶೀಲನೆ ಮಾಡಿ ಅರ್ಹತೆ ಉಳ್ಳವರಿಗೆ ಮಾತ್ರ ನೀವೇಶನ ನೀಡಲಾಗುವುದು ಎಂದರು.

ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಂಕಿ ಅನಾಹುತದಿಂದ ಗುಡಿಸಲನ್ನು, ದಿನಬಳಕೆ ವಸ್ತುಗಳನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದೇನೆ, ಮಠದ ಭಕ್ತರ ಸಹಕಾರದಿಂದ ಅಡುಗೆ ಪಾತ್ರೆಮತ್ತು ಬಟ್ಟೆಯನ್ನು ಬಡ ಕುಟುಂಬಗಳಿಗೆ ವಿತರಣೆ ಮಾಡಿದ್ದೇವೆ, ಇಂತಹ ಅವಘಡ 2 ವರ್ಷದ ಹಿಂದೆಯೂ ನಡೆದಿತ್ತು, ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ತಿಳಿಸಿ ಆಶ್ರಯ ಯೋಜನೆಯ ವ್ಯವಸ್ಥೆ ಶೀಘ್ರವೇ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಗ್ರಾಪಂ ಅಧ್ಯಕ್ಷ ನಾಗರಾಜು, ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜು, ಜಯರಾಂ, ದೇವರಾಜು, ರಘು, ದರ್ಶನ್, ಕೆಂಪರಾಜು, ಶಿವಕುಮಾರ್, ಮಠದ ಸದ್ಭಕ್ತರಾದ ಜಿ.ಎಸ್.ಎಂ.ರಘು, ಬಾಲಾಜಿ, ದರ್ಶನ್ ಇನ್ನಿತರರು ಇದ್ದರು.

ಸಂತ್ರಸ್ಥರ ಕುಟುಂಬಕ್ಕೆ ನೆರವಾದ ಮಠಾಧೀಶರು

ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯ ದಿನವೇ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚಿಂಪುಗಾನ ಹಳ್ಳಿ ಗ್ರಾಮದಲ್ಲಿ 10 ಗುಡಿಸಲಿಗೆ ಬೆಂಕಿ ಬಿದ್ದು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು, ಈ ವಿಷಯ ತಿಳಿದ ಕೂಡಲೇ ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಪಾವಗಡದ ಜಪಾನಂದ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಬಿಜೆಪಿ ಮುಖಂಡ ಅನಿಲ್ ಕುಮಾರ್ ಸೇರಿದಂತೆ ಇತರೆ ಮಠಮಾನ್ಯದ ಶ್ರೀಗಳು ಆಹಾರ ಪದಾರ್ಥ, ಬಟ್ಟೆ, ಧನ ಸಹಾಯ, ಅನೇಕ ವಸ್ತುಗಳು ನೀಡಿ ಸಂಕಷ್ಟಕ್ಕೆ ನೆರವಾಗಿ ಸಹಾಯ ಹಸ್ತ ಚಾಚಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯೆಂದು ಸ್ಥಳೀಯರು ಸಂತೋಷ ಹಂಚಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!