ಸಮರ್ಪಕ ಬರ ನಿರ್ವಹಣೆಗೆ ಕ್ರಮ ವಹಿಸಿ

ಸಮಸ್ಯಾತ್ಮಕ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಲಿ: ಡೀಸಿ

36

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆಯನ್ನು ಬರಪೀಡಿತವೆಂದು ರಾಜ್ಯ ಸರ್ಕಾರವು ಘೋಷಿಸಿರುವ ಹಿನ್ನೆಲೆಯಲ್ಲಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಬೇಕಿದ್ದು, ಈ ನಿಟ್ಟಿನಲ್ಲಿ ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು ಹಾಗೂ ಮೇವು ಬ್ಯಾಂಕ್ ಸ್ಥಾಪನೆಗೊಂಡ ಪ್ರದೇಶಗಳು ಸೇರಿದಂತೆ ಸಮಸ್ಯಾತ್ಮಕ ಪ್ರದೇಶಗಳಿಗೆ ಅಧಿಕಾರಿಗಳು ಆಗಾಗ್ಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆ ಅವಧಿ, ಸುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ, ಬತ್ತಿ ಹೋಗಿರುವ ಕೊಳವೆ ಬಾವಿ, ದುರಸ್ತಿಯಲ್ಲಿರುವ ಕೊಳವೆ ಬಾವಿಗಳು, ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯುತ್ತಿರುವ ಗ್ರಾಮಗಳು ಸೇರಿದಂತೆ ಮೊದಲಾದ ಮಾಹಿತಿ ಪಡೆದ ಅವರು ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಜಿಲ್ಲೆಯಾದ್ಯಂತ ಸಮರ್ಪಕ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಲ್ಲಿಸಿದ ಎಲ್ಲಾ ಕಾಮಗಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಅನುಮೋದನೆ ನೀಡಲಾಗಿದ್ದು, ಎನ್ಡಿ ಆರ್ಎಫ್ ಹಾಗೂ ಎಸ್ ಡಿಆರ್ ಎಫ್ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಧಿಕಾರಿಗಳು ಕಾರ್ಯೋನ್ಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಸಮಸ್ಯೆ ನಿವಾರಿಸಲು ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನ ಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಅಗತ್ಯ ವಿರುವ ಕಡೆ ಖಾಸಗಿ ಕೊಳವೆ ಬಾವಿಗಳು, ಟ್ಯಾಂಕರ್ ಗಳ ಮೂಲಕ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು, ಬತ್ತಿ ಹೋದ ಕೊಳವೆ ಬಾವಿಗಳನ್ನು ಇನ್ನಷ್ಟು ಆಳ ಕೊರೆಯಲು ಕ್ರಮ ಕೈಗೊಳ್ಳಬೇಕು, ಅವಶ್ಯಕತೆ ಇರುವ ಕಡೆ ಕೊಳವೆ ಬಾವಿ ಕೊರೆಯಲು ಈಗಾಗಲೇ ಅನುಮತಿ ನೀಡಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯುವ ಸಂಬಂಧ ಕಾರ್ಯಪಡೆ ಸಭೆಯಲ್ಲಿ ಅನಮೋದನೆ ಪಡೆದು ಕ್ರಮ ವಹಿಸಬೇಕು, ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಸಾರ್ವಜನಿಕರಿಗೆ ಅರಿವು ಮೂಡಿಸಿ
ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಪ್ರತಿನಿತ್ಯ ಸಮರ್ಪಕ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು, ಕುಡಿಯುವ ನೀರು ಸಮಸ್ಯೆ ಇರುವ ಪ್ರದೇಶಗಳ ನಿವಾಸಿಗಳು ನೀರನ್ನು ಸಣ್ಣ ಹಾಗೂ ದೊಡ್ಡ ಟ್ಯಾಂಕ್ ಗಳಲ್ಲಿ ಸಂಗ್ರಹಿಸುತ್ತಾರೆ, ಇಂತಹ ಸ್ಥಳಗಳಲ್ಲಿ ಅತೀ ಹೆಚ್ಚು ಸೊಳ್ಳೆ ಉತ್ಪತ್ತಿಗೊಂಡು ಮಲೇರಿಯಾ, ಡೆಂಗ್ಯೂವಿನಂತಹ ಅನೇಕ ಕಾಯಿಲೆ ಉಲ್ಭಣಗೊಳ್ಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಅಧಿಕಾರಿಗಳು ಸೇರಿದಂತೆ ಮತ್ತಿತರ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಸಮರ್ಪಕ ಬರ ನಿರ್ವಹಣೆ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇನ್ನು ಅವಶ್ಯಕತೆ ಇದ್ದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ತ್ವರಿತವಾಗಿ ಅನುಮೋದನೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಗಿರೀಶ್ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ರವೀಶ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್ ಕುಮಾರ್ ಸೇರಿದಂತೆ ಎಲ್ಲಾ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!