ಟ್ಯಾಂಕರ್ ನೀರು ಪರೀಕ್ಷಿಸಿ ಪೂರೈಕೆ ಮಾಡಿ: ಸಿಇಓ

20

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಮಳೆ ಬಾರದೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಪೂರೈಕೆಗೂ ಮುನ್ನ ಕುಡಿಯಲು ಯೋಗ್ಯವಿರುವ ಬಗ್ಗೆ ನೀರನ್ನು ಪರೀಕ್ಷೆ ಗೊಳಪಡಿಸಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಕಚೇರಿಯ ತಮ್ಮ ಕೊಠಡಿಯಲ್ಲಿ ಮಂಗಳವಾರ ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಸಿದ್ಧಪಡಿಸಿರುವ ಕ್ರಿಯಾ ಯೋಜನೆಯ ಅನುಮೋದನೆಗಾಗಿ ಜರುಗಿದ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯಾತ್ಮಕ 23 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ, ಟ್ಯಾಂಕರ್ ನೀರನ್ನು ಜನರಿಗೆ ಒದಗಿಸುವ ಮುನ್ನ ನೀರಿನ ಮಾದರಿಯನ್ನು 3 ದಿನಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಬೇಕೆಂದು ಟ್ಯಾಂಕರ್ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಸರ್ಕಾರದಿಂದ ಹಂತ- ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಸಮಸ್ಯಾತ್ಮಕ ಗ್ರಾಮಗಳಿಗೆ ಈ ಹಣ ವಿನಿಯೋಗಿಸಿ ಕುಡಿಯುವ ನೀರಿನ ಕಾಮಗಾರಿ ಕೈಗೊಂಡು ಶಾಶ್ವತ ಪರಿಹಾರ ನೀಡಬೇಕೆಂದು ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಿಡಿಓಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಆದ್ಯತೆ ಮೇಲೆ ಹೊಸ ಕೊಳವೆ ಬಾವಿಗಳಿಗೆ ಅನುಮತಿ ನೀಡಲಾಗಿದೆ, ಹೊಸ ಕೊಳವೆ ಬಾವಿ ಕೊರೆಯುವ ಮುನ್ನ ಹಿರಿಯ ಭೂವಿಜ್ಞಾನಿಗಳಿಂದ ಜಲಬಿಂದು ಗುರುತಿಸಿ ನೀರಿನ ಇಳುವರಿ ಇರುವ ಕಡೆ ಕೊಳವೆಬಾವಿ ಕೊರೆಸಲು ಸಲಹೆ ನೀಡಿದರು.

12 ಹೊಸ ಕೊಳವೆ ಬಾವಿಗಳಿಗೆ ಅನುಮೋದನೆ
ಸಭೆಯಲ್ಲಿ ಗುಬ್ಬಿ, ತುರುವೇಕರೆ, ಶಿರಾ ಹಾಗೂ ತುಮಕೂರು ತಾಲ್ಲೂಕಿನ 12 ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆ ಹಾಗೂ ಬಿದರೆ, ತುಮಕೂರಿನ ಅಪ್ಪಿನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕಿನ ಮಂಕಿಕುಪ್ಪೆ, ಕಣತೂರು, ಶಿರಾ ತಾಲ್ಲೂಕಿನ ಸಾಕ್ಷಿಹಳ್ಳಿ, ರಾಮನಹಳ್ಳಿ, ಯರದಕಟ್ಟೆ, ಸೋರೆಕುಂಟೆ, ಜಿ.ರಂಗನಹಳ್ಳಿ, ಶಾಖದಡು ಹಾಗೂ ಅಂತಾಪುರ ಸೇರಿದಂತೆ ಒಟ್ಟು 12 ಗ್ರಾಮಗಳಲ್ಲಿ ಹೊಸ ಕೊಳವೆಬಾವಿ ಕೊರೆಯಲು ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಆಡಳಿತ) ಹಾಲಸಿದ್ದಪ್ಪ ಪೂಜೇರಿ, ಉಪ ಕಾರ್ಯದರ್ಶಿ (ಅಭಿವೃದ್ಧಿ) ವಿಜಯ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ರಂಗಧಾಮಯ್ಯ, ಕೃಷಿ ಜಂಟಿ ನಿರ್ದೇಶಕ ರಮೇಶ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಂದ್ರಶೇಖರ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಶಿರಾ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಆರ್.ಮಂಜುಪ್ರಸಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!