ಯೋಗಾಭ್ಯಾಸದಿಂದ ಬುದ್ಧಿ ಬೆಳವಣಿಗೆ ಸಾಧ್ಯ

35

Get real time updates directly on you device, subscribe now.


ಮಧುಗಿರಿ: ಯೋಗಾಭ್ಯಾಸದಿಂದ ಯಾವುದೇ ನಷ್ಟವಿಲ್ಲ, ನಮ್ಮ ಬೆಳವಣಿಗೆ ಬುದ್ಧಿ- ಜ್ಞಾನ ವೃದ್ಧಿಗೆ ತುಂಬಾ ಅನುಕೂಲವಾಗುತ್ತದೆ, ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ದೇಶದಲ್ಲಿ ಯೋಗಕ್ಕೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಮಧುಗಿರಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರಮೀಳಾ ತಿಳಿಸಿದರು.

ಪಟ್ಟಣದ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಹೇಮಾವತಿ ವಲಯ ಮಧುಗಿರಿ ಶಾಖೆ ವತಿಯಿಂದ ಕಳೆದ 21 ದಿನಗಳಿಂದ ನಡೆಯುತ್ತಿದ್ದ ಮಕ್ಕಳ ವಸಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಯೋಗಾಭ್ಯಾಸ ನಿರಂತರವಾಗಿ ಮಾಡುವುದರಿಂದ ಎಂತಹ ಮಾನಸಿಕ ಒತ್ತಡವಿದ್ದರೂ ದೂರವಾಗುತ್ತದೆ, ಪ್ರಸ್ತುತ ನ್ಯಾಯಾಲಯಗಳಲ್ಲಿ ಬರುತ್ತಿರುವ ಹಲವು ಪ್ರಕರಣಗಳಲ್ಲಿ ಅಪ್ರಾಪ್ತ ಮಕ್ಕಳಿಂದ ದಾರಿ ತಪ್ಪುವ ಕೆಲಸವಾಗುವುದನ್ನು ಕಾಣಬಹುದಾಗಿದೆ, ಇವಕ್ಕೆಲ್ಲ ಮೂಲ ಕಾರಣ ಮೊಬೈಲ್ ಗಳೆಂದು ಹೇಳಲಾಗುತ್ತಿದೆ, ಆದರೂ ಮೊಬೈಲ್ ಗಳಿಂದ ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ತಿರಸ್ಕರಿಸಿ ಎಂದರು.

ಗುರುಗಳ ಗುಲಾಮನಾಗುವ ತನಕ ಸಿಗದು ಮುಕುತಿ ಎಂಬ ಧಾರ್ಮಿಕರ ಮಾತಿನಂತೆ ಮನೆಯಲ್ಲಿನ ಪೂರ್ವಿಕರ ಮತ್ತು ತಂದೆ ತಾಯಿಗಳ, ಗುರು ಹಿರಿಯರ ಮಾತುಗಳನ್ನು ಕೇಳಬೇಕು, ಮಕ್ಕಳು ತಾವುಗಳು ತಪ್ಪು ಮಾಡಿದರೆ ಮುಚ್ಚಿಟ್ಟುಕೊಳ್ಳಲು ಹೋಗಬೇಡಿ, ತಕ್ಷಣವೇ ಪೋಷಕರಿಗೆ ತಿಳಿಸುವುದನ್ನು ಮರೆಯಬೇಡಿ, ತಪ್ಪುಗಳನ್ನು ಮುಚ್ಚಿಟ್ಟಷ್ಟು ಹೆಚ್ಚು ತಪ್ಪು ಮಾಡುತ್ತಾ ಹೋಗುತ್ತಿರುತ್ತೀರಾ, ಇಂತಹ ಶಿಬಿರಗಳಲ್ಲಿ ಸ್ವಾತಂತ್ರ ಹೋರಾಟಗಾರರು, ಚಿತ್ರಕಲೆ, ಯೋಗ, ಹಲವು ಪಠ್ಯಕ್ಕೆ ಸಂಬಂಧಿಸಿದ ಮಾಹಿತಿ, ಆಟ ಆಡಿಸಿದ್ದನ್ನು ಕೇಳಿದ್ದೇನೆ, ಇಲ್ಲಿಂದ ಕಲಿತ ಸಂಸ್ಕಾರವನ್ನು ನಿಮ್ಮ ಜೀವಿತಾವಧಿಯಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ನಾಗರಿಕರಾಗಿ ಎಂದು ಕರೆ ನೀಡಿದರು.

ಶಿಶುನಾಳ ತತ್ವ ಪ್ರಚಾರಕ ಹಾಗೂ ನಿವೃತ್ತ ಉಪ ನಿರ್ದೇಶಕ ಡಾ.ಎಂ.ಸಿ.ನರಸಿಂಹಮೂರ್ತಿ ಮಾತನಾಡಿ, ಮಕ್ಕಳು ಫೇಸ್ಬುಕ್ ಮತ್ತು ವಾಟ್ಸಪ್ ಬದಲಾಗಿ ಪ್ರಾಣಿ- ಪಕ್ಷಿಗಳೊಡನೆ ಮಾತನಾಡುವ ಕಲೆ ರೂಡಿಸಿಕೊಳ್ಳಿ, ರಾಮಾಯಣ ಮತ್ತು ಮಹಾ ಭಾರತಗಳಂತಹ ಮಹಾ ಕಾವ್ಯಗಳನ್ನು ಓದಿ, ಪುಸ್ತಕಗಳಿಗೆ ಅಂಟಿಕೊಳ್ಳದೆ ತಂದೆ ತಾಯಂದಿರು ಮತ್ತು ಹಿರಿಯರೊಡನೆ ಅವರ ಅನುಭವ ತಿಳಿಯಲು ಯತ್ನಿಸಿ ಎಂದು ತಿಳಿಸಿದರು.
ಹಿರಿಯ ವಕೀಲ ಜಿ.ಬಿ.ಹಾಲಪ್ಪ, ಮಧುಗಿರಿ ಶಾಖೆ ಸಂಚಾಲಕ ಎಂ.ಎನ್.ನರಸಿಂಹಮೂರ್ತಿ, ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!