ಕಾಡು ಪ್ರಾಣಿಗಳಿಗೆ ಜೀವ ಜಲವಿಲ್ಲದೆ ಸಂಕಷ್ಟ

ಅರಣ್ಯ ಇಲಾಖೆ, ಸಂಘಟನೆಗಳಿಂದ ಕಾಡಲ್ಲಿ ನೀರಿನ ವ್ಯವಸ್ಥೆ

25

Get real time updates directly on you device, subscribe now.


ಗುಬ್ಬಿ: ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಇನ್ನೊಂದೆಡೆ ಮಳೆ ಇಲ್ಲದೆ ಕಾಡಿನಲ್ಲಿ ಬದುಕುತ್ತಿರುವ ಪ್ರಾಣಿಗಳಿಗೆ ನೀರಿನ ಹಾಹಾಕಾರ ಸೃಷ್ಟಿಯಾಗಿದೆ, ಹಾಗಾಗಿ ಕಾಡು ಪ್ರಾಣಿಗಳು ಗ್ರಾಮದ ಒಳಭಾಗಕ್ಕೆ ಬರುತ್ತಿವೆ, ಕಾಡಿನಲ್ಲಿರುವ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಬರಿದಾಗಿವೆ, ಹಾಗಾಗಿ ಕಾಡು ಪ್ರಾಣಿಗಳು, ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ವರ್ಷದ ಬೇಸಿಗೆ ಅತ್ಯಧಿಕವಾಗಿದ್ದು 38 ಡಿಗ್ರಿ ಯಿಂದ 40 ಡಿಗ್ರಿ ವರೆಗೂ ಬಿಸಿಲು ಕಂಡು ಬರುತ್ತಿದೆ, ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಾಣಿಸುತ್ತಿದೆ, ಹಾಗಾಗಿ ಕೆರೆಗಳಲ್ಲಿ ನೀರಿಲ್ಲ, ಕಾಡಿನಲ್ಲಿ ಇದ್ದಂತಹ ಕಟ್ಟೆಗಳಲ್ಲಿಯೂ ನೀರು ಇಲ್ಲದೆ ಮೂಕ ಪ್ರಾಣಿಗಳ ರೋಧನೆ ಹೇಳ ತೀರದಾಗಿದೆ.

ಇದೆಲ್ಲವನ್ನೂ ಮನಗಂಡ ಅರಣ್ಯ ಇಲಾಖೆ ಹಾಗು ಕೆಲಸ ಸಂಘಟನೆಗಳ ಕಾಡಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಅರಣ್ಯ ಇಲಾಖೆ ಕಾಡಿನ ಒಳಭಾಗದಲ್ಲಿ ಸುಮಾರು 20 ತೊಟ್ಟಿ ನಿರ್ಮಾಣ ಮಾಡಿ ಅದಕ್ಕೆ ನೀರು ಬಿಡುವ ಮೂಲಕ ಪ್ರಾಣಿ ಮತ್ತು ಪಕ್ಷಿಗಳ ದಾಹ ತಣಿಸುವ ಕೆಲಸ ಮಾಡಿದೆ.
ಗುಬ್ಬಿ ತಾಲೂಕಿನ ತೀರ್ಥರಾಂಪುರ, ಮಾರಶೆಟ್ಟಿ ಹಳ್ಳಿ, ಶಿವಸಂದ್ರ, ಅಂಕಸಂದ್ರ ಸೇರಿದಂತೆ ಹಲವು ಭಾಗದ ಕಾಡುಗಳಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಿ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ, ಅದಕ್ಕೆ ಅರಣ್ಯ ಇಲಾಖೆಯೇ ನೀರಿನ ವ್ಯವಸ್ಥೆ ಮಾಡುತ್ತಿರುವುದು ಕಂಡು ಬರುತ್ತಿದೆ, ಯಾರಾದರೂ ದಾನಿಗಳು ನೀರಿನ ವ್ಯವಸ್ಥೆ ಮಾಡಿದರೆ ಒಳಿತು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಇನ್ನು ಚಿಕ್ಕನಾಯಕನ ಹಳ್ಳಿ ಹಾಗೂ ಗುಬ್ಬಿ ತಾಲೂಕಿನ ಗಡಿಭಾಗದ ಗುಡ್ಡಗಾಡುಗಳಲ್ಲಿ ನೆರಳು ಎಂಬ ಸಂಘಟನೆ ಸಹ ಬಹಳ ವಿಶೇಷವಾಗಿ ಪರಿಸರ ಮತ್ತು ಪ್ರಾಣಿಗಳ ಮೇಲೆ ಕಾಳಜಿ ವಹಿಸಿ ಸುಮಾರು ಆರು ಕಡೆ ಸ್ವಂತ ಹಣದಿಂದ ತೊಟ್ಟಿಗಳನ್ನು ನಿರ್ಮಾಣ ಮಾಡಿ ಅವರೆ ನೀರು ಬಿಡುವಂತಹ ಕೆಲಸ ಮಾಡುತ್ತಿರುವುದು ವಿಶೇಷ ಎನಿಸಿದೆ.
ಹುಟ್ಟುಹಬ್ಬದಂತಹ ಹಲವು ಸಂಭ್ರಮಗಳಲ್ಲಿ ಕೇಕ್ ಕತ್ತರಿಸಿ ಆಡಂಬರ ಮಾಡುವುದಕ್ಕಿಂತ ಇಂತಹ ನೀರಿನ ತೊಟ್ಟಿಗಳಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ನೀಡಿದರೆ ಖಂಡಿತವಾಗಿಯೂ ನಮ್ಮ ಸುತ್ತಮುತ್ತಲ ಕಾಡಿನ ಪ್ರಾಣಿಗಳನ್ನು ಉಳಿಸಬಹುದು ಎನ್ನುತ್ತಾರೆ ನೆರಳು ಸಂಘಟನೆಯ ಹುಸೇನ್ ಗುಂಡ.

ಗುಬ್ಬಿ ತಾಲೂಕಿನ ಕಾಡುಗಳಲ್ಲಿ ಚಿರತೆ, ಕಾಡು ಹಂದಿ, ಕಾಡು ಮೊಲ, ಪಕ್ಷಿಗಳು, ನವಿಲು ಅಧಿಕವಾಗಿ ಕಂಡು ಬರುತ್ತವೆ, ಅವುಗಳಿಗೆ ನೀರಿನ ದಾಹ ತೀರಿಸಲು ಈ ತೊಟ್ಟಿ ಬಳಕೆ ಮಾಡಲಾಗುತ್ತಿದೆ, ಮುಂದಿನ ದಿನದಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾದರೆ ನೀರು ಸಹ ಈ ತೊಟ್ಟಿಯಲ್ಲಿ ನಿಲ್ಲುವುದಿಲ್ಲ, ಹಾಗಾಗಿ ಬದಲಿ ವ್ಯವಸ್ಥೆ ಮಾಡಲೇ ಬೇಕಿದೆ.
ಇತ್ತೀಚೆಗೆ ಕಾಡಿನಲ್ಲಿ ಇರಬೇಕಾದ ಚಿರತೆಯಂತಹ ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗು ತ್ತಿರುವುದು ಕಂಡು ಬರುತ್ತಿದೆ, ಕಾಡಂಚಿನ ಗ್ರಾಮಗಳಿಗೆ ಆಗಮಿಸುತ್ತಿರುವ ಚಿರತೆಗಳು ಕೋಳಿ, ಕುರಿ, ನಾಯಿಗಳ ಮೇಲೆ ಅಟ್ಯಾಕ್ ಮಾಡುತ್ತಿದ್ದು ಪ್ರತಿನಿತ್ಯ ಈ ವಿಚಾರ ಚರ್ಚೆಯಾಗುತ್ತಲೇ ಇದೆ.

ಗುಬ್ಬಿ ವಲಯ ಅರಣ್ಯ ಅಧಿಕಾರಿ ಸತೀಶ್ ಚಂದ್ರ ಮಾತನಾಡಿ, ಕಾಡಿನಲ್ಲಿ ಯಾವುದೇ ರೀತಿಯ ನೀರಿನ ವ್ಯವಸ್ಥೆ, ಆಹಾರ ಇಲ್ಲದೆ ಇರುವುದೇ ಕಾಡು ಪ್ರಾಣಿಗಳು ನಾಡಿಗೆ ನುಗ್ಗಲು ಕಾರಣವಾಗಿದೆ, ಹಾಗಾಗಿ ಅರಣ್ಯ ಪ್ರದೇಶದ ಒಳಭಾಗದಲ್ಲಿ ಹೆಚ್ಚು ತೊಟ್ಟಿಗಳನ್ನು ನಿರ್ಮಾಣ ಮಾಡಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಪ್ರಾಣಿಗಳು ಗ್ರಾಮಗಳಿಗೆ ನುಗ್ಗುವುದು ತಪ್ಪಿಸಬಹುದು.
ಗುಬ್ಬಿ ತಾಲೂಕಿನಲ್ಲಿ 20 ಕಡೆ ನೀರಿನ ತೊಟ್ಟಿ ಮಾಡಿದ್ದು ಅರಣ್ಯ ಇಲಾಖೆಯಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ, ಮುಂದಿನ ದಿನದಲ್ಲಿ ಮಳೆ ಬರದೇ ಇದ್ದರೆ ಕಷ್ಟವಾಗುತ್ತದೆ, ಸಂಘ ಸಂಸ್ಥೆಯವರು ಕೈ ಜೋಡಿಸಿ ನೀರಿನ ವ್ಯವಸ್ಥೆ ಮಾಡಿದರೆ ಉತ್ತಮ ಎಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!