ಪ್ರಕೃತಿ ಸಮತೋಲನ ಕಾಪಾಡಲು ಚಿರತೆ ರಕ್ಷಿಸಿ

45

Get real time updates directly on you device, subscribe now.


ಕುಣಿಗಲ್: ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಕಣ್ಮರೆಯಾಗುತ್ತಿರುವ ಪ್ರಾಣಿಗಳ ಗುಂಪಿಗೆ ಚಿರತೆ ಸೇರಿದೆ, ಪ್ರಕೃತಿ ಸಮತೋಲನ ಕಾಪಾಡಲು ಚಿರತೆ ಸಂರಕ್ಷಿಸುವುದು ಎಲ್ಲರ ಕರ್ತವ್ಯ ಎಂದು ಪರಿಸರವಾದಿ ಗುಂಡಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರಿಯ ಚಿರತೆ ದಿನಾಚರಣೆ 2024 ಅಂಗವಾಗಿ ನಡೆದ ಚಿರತೆ ಬಗ್ಗೆ ಜಾಗೃತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ, ದೇಶದಲ್ಲಿ ಬೆಕ್ಕಿನ ಜಾತಿಗೆ ಸೇರಿದ ಮೂರು ಕಾಡು ಪ್ರಾಣಿಗಳಾದ ಸಿಂಹ, ಹುಲಿ, ಚಿರತೆಗಳಿದ್ದು ದೇಶದಲ್ಲಿ ಒಟ್ಟು 13,274 ಚಿರತೆಗಳಿದ್ದು ಈ ಪೈಕಿ ಕರ್ನಾಕದಲ್ಲಿ ಎರಡರಿಂದ ಎರಡುವರೆ ಸಾವಿರ ಚಿರತೆಗಳಿವೆ, ಚಿರತೆಗಳು ಎಂದು ನರಭಕ್ಷಕವಲ್ಲ ಎಂಬುದ ಎಲ್ಲರೂ ಅರಿಯ ಬೇಕು, ಹನ್ನೆರಡರಿಂದ ಹದಿನಾಲ್ಕು ವರ್ಷ ಜೀವಿತಾವಧಿ ಹೊಂದಿರುವ ಚಿರತೆಗಳಿಗೆ ನವಿಲು, ಹಂದಿ ಪ್ರಿಯವಾದ ಆಹಾರ ಎಂದರು.

ತೋಟಗಳು ಮೊದಲು ಸೀಮಿತವಾಗಿದ್ದು ತೋಟದ ಕೃಷಿ ವ್ಯಾಪಕವಾದಂತೆ ಪೊದೆಗಳು ಹೆಚ್ಚಾಗಿದ್ದು ನವಿಲು, ಹಂದಿಗಳ ವಾಸ ಸ್ಥಾನವೂ ಆದ ಕಾರಣ ಗ್ರಾಮದ ಪ್ರದೇಶದಲ್ಲಿ ಚಿರತೆಗಳು ಸಹಜವಾಗಿ ಆಹಾರ ಅರಸಿ ಬರತೊಡಗಿವೆ, ಅರಣ್ಯ ಪ್ರದೇಶದಲ್ಲಿ ಚಿರತೆಗೆ ಬೇಕಾದ ಆಹಾರದ ಕೊರತೆಯೂ ಕಾರಣ, ಅರಣ್ಯದ ಸರಹದ್ದಿನಲ್ಲಿರುವ ತೋಟ, ಕೋಳಿ ಫಾರಂಗಳಲ್ಲಿ ಚಿರತೆ ಆಹಾರ ಅರಸಲು ಬಂದಾಗ ಮತ್ತು ತಾಯಿ ಚಿರತೆ ಮಕ್ಕಳಿಗೆ ಬೇಟೆಯಾಡುವ ತರಬೇತಿ ನೀಡುವ ಸಮಯದಲ್ಲಿ ಆಕ್ರಮಣಕಾರಿ ಆಗಿರುತ್ತವೆ, ಚಿರತೆಗಳು ರಾತ್ರಿವೇಳೆ ಮಾತ್ರ ಸಂಚಾರ ಮಾಡುತ್ತಿದ್ದು ಹಗಲು ವೇಳೆಯಲ್ಲಿ ಪೊದೆ, ಪೊಟರೆಗಳಲ್ಲಿ ವಾಸ ಮಾಡುತ್ತವೆ, ಆಹಾರಕ್ಕಾಗಿ ಬಹಳ ದೂರ ಸಾಗುವ ಚಿರತೆ ಪರಿಸರ ಸಮತೋಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಚಿರತೆಗಳು ನಗರ, ಗ್ರಾಮ ಪ್ರದೇಶದಲ್ಲಿ ಕಂಡಾಗ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಅವುಗಳ ರಕ್ಷಣೆಗೆ ಮುಂದಾಗಬೇಕಿದೆ, ಈ ಭೂಮಿಯ ಮೇಲೆ ಚಿರತೆಗಳಿಗೂ ನಮ್ಮಂತೆ ಬದುಕುವ ಹಕ್ಕು ಇದೆ, ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಚಿರತೆ ಬೇಟೆಯಾಡುವುದು, ಹಲ್ಲೆ ಮಾಡುವುದು, ಚಿರತೆಯ ಅವಶೇಷ ಹೊಂದುವುದು ಗಂಭೀರ ಅಪರಾಧವಾಗುತ್ತದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಮಾತನಾಡಿ, ಕೊವಿಡ್ ನಂತರದ ಅವಧಿಯಲ್ಲಿ ಮನುಷ್ಯ ಪ್ರಕೃತಿ ಸಂರಕ್ಷಣೆ ನಿಟ್ಟಿನಲ್ಲಿ ತೋರಿದ ನಿರ್ಲಕ್ಷ್ಯ ಇಂದು ಹಲವಾರು ಸಮಸ್ಯೆ ಎದುರಿಸುವಂತಾಗಿದೆ, ಮಾಂಸಹಾರಿ ಪ್ರಾಣಿಯಾದ ಚಿರತೆಯು ಅರಣ್ಯ ಪರಿಸರ ಸೇರಿದಂತೆ ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ, ಚಿರತೆಗಳು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾದಲ್ಲಿ ಚಿರತೆ ಅವಲಂಭಿಸಿದ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಅಸಮತೋಲನಕ್ಕೆ ಕಾರಣವಾಗಿ ಹಲವು ಸಮಸ್ಯೆಗೆ ಕಾರಣವಾಗುತ್ತದೆ, ಸಂವಿಧಾನದಲ್ಲಿ ಎಲ್ಲಾ ಪ್ರಾಣಿಗಳು ನಮ್ಮಂತೆ ಬದುಕಿ ಬಾಳುವ ಹಕ್ಕಿನ ರಕ್ಷಣೆ ಕಲ್ಪಿಸಿರುವ ಕಾರಣ ವಿದ್ಯಾರ್ಥಿಗಳು ಈಬಗ್ಗೆ ಮನನ ಮಾಡಿಕೊಂಡು ತಮ್ಮ ಪೋಷಕರು, ನೆರೆ ಹೊರೆಯವರಲ್ಲಿ ಚಿರತೆ ಸೇರಿದಂತೆ ಇತರೆ ಪ್ರಾಣಿಗಳ ರಕ್ಷಣೆಗೆ ಶ್ರಮಿಸಬೇಕೆಂದರು.
ಪ್ರಾಚಾರ್ಯೆ ಮಾಯ ಸಾರಂಗ ಪಾಣಿ, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಮಹೇಶ್ ಮಾಲಗತ್ತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು, ವಲಯ ಅರಣ್ಯಾಧಿಕಾರಿಗಳಾದ ಪುನೀತ್, ಜಗದೀಶ್, ಚಿರತೆ ಸಂರಕ್ಷಕ ವೇಣು, ಪ್ರೊ.ಗೋವಿಂದರಾಯ, ರಾಮಾಂಜನಪ್ಪ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!