ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಅರಳಗುಪ್ಪೆಯಲ್ಲಿ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಭಾಗ್ಯಮ್ಮ (50) ಎಂಬ ರೈತ ಮಹಿಳೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಮಹಿಳೆ ತಿಪಟೂರಿನ ಫೈನಾನ್ಸ್ ಕಂಪನಿಗಳಿಂದ ಸುಮಾರು 5 ಲಕ್ಷ ಸಾಲ ಪಡೆದು ಸಾಲ ಹಿಂದಿರುಗಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ, ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು, ಗಂಡ ನಿಧನರಾಗಿದ್ದು, ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ.
ಅರಳಗುಪ್ಪೆ ಗ್ರಾಮದಲ್ಲಿ ಇದು ಮೂರನೇ ಘಟನೆ, ಇದುವರೆಗೆ ಮೂರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ವಿಚಾರವಾಗಿ ಸುಮಾರು ಬಾರಿ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಈ ವಿಚಾರವಾಗಿ ಹಲವು ಬಾರಿ ಫೈನಾನ್ಸ್ ನವರಿಗೆ ಗ್ರಾಮಸ್ಥರು ಗ್ರಾಮದಲ್ಲಿ ಸಾಲ ವಿತರಿಸಬೇಡಿ, ತುಂಬಾ ಬಡ ಕುಟುಂಬದವರು ವಾಸವಾಗಿದ್ದು, ಈ ಬರಗಾಲದಲ್ಲಿ ಸಾಲ ತೀರಿಸಲು ಆಗುತ್ತಿಲ್ಲ, ಆದ್ದರಿಂದ ಈ ಗ್ರಾಮಕ್ಕೆ ಯಾರು ಕೂಡ ಸಾಲ ನೀಡಬಾರದೆಂದು ತಿಳಿಸಿದರೂ ಫೈನಾನ್ಸ್ ಸಿಬ್ಬಂದಿ ಕಮಿಷನ್ ಆಸೆಗೋಸ್ಕರ ಸುಮಾರು ಎಂಟರಿಂದ ಹತ್ತು ಮಹಿಳೆಯರ ಗುಂಪು ಮಾಡಿ ಸಾಲ ವಿತರಿಸುತ್ತಿದ್ದು, ಈ ಗ್ರಾಮದಲ್ಲಿ ಇನ್ನೆಷ್ಟು ಜನ ಮಹಿಳೆಯರು ಸಾವನ್ನಪ್ಪಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.