ಚಿಕ್ಕನಾಯಕನ ಹಳ್ಳಿ: ತಾಲೂಕಿನಲ್ಲಿ ವಿಪರೀತ ಬಿಸಿಲಿನಿಂದ ಜನ ಜೀವನವೆ ಅಸ್ಥವ್ಯಸ್ಥ ವಾಗುತ್ತಿದ್ದು, ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗುತ್ತಿದೆ, ಜಾನುವಾರುಗಳಿಗೆ ಮೇವಿಲ್ಲ, ಮರ ಗಿಡಗಳಿಗೆ ನೀರಿಲ್ಲದ ಪರಿಸ್ಥಿತಿ ಉಂಟಾಗಿದ್ದು, ಬೆಂಕಿಯಂತಹ ಬಿಸಿಲಿಗೆ ಜನಸಮಾನ್ಯರಿಗೆ ಬೇಕಿದೆ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ.
ಕಳೆದ ಎರಡು ತಿಂಗಳಿಂದ ಕಂಡು ಕೇಳರಿಯದಂತಹ ಬಿಸಿಲು ರೈತರ ಜೀವನವನ್ನೆ ಹಾನಿ ಮಾಡುತ್ತಿದ್ದು ಜೀವನಕ್ಕೆ ಆಧಾರವಾಗಿದ್ದ ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ, ತೆಂಗು, ಅಡಿಕೆ ಮರಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ, ಕೂಲಿ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡಲಾಗದಂತಾಗಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಹೆಚ್ಚಾಗುತ್ತಿದೆ, ರೈತರ ಹೈನುಗಾರಿಕೆಯೂ ನೆಲ ಕಚ್ಚುತ್ತಿದೆ, ಪ್ರಾಣಿ ಪಕ್ಷಿಗಳಿಗೆ ದಾಹ ನೀಗಿಸಿಕೊಳ್ಳಲು ಭೂಮಿಯ ಮೇಲೆ ನೀರಿಲ್ಲದಂತಾಗಿದೆ, ಪ್ರಕೃತಿಯ ಮುನಿಸಿನಿಂದ ಜನಸಾಮಾನ್ಯರು ತತ್ತರಿಸಿ ಹೋಗುತ್ತಿದ್ದು, ತೋಟಗಳಿಂದ ಸದ್ಯಕ್ಕೆ ಆದಾಯ ಬೇಡ ಇರುವ ತೆಂಗು- ಅಡಿಕೆ ಮರಗಳ ಜೀವ ಉಳಿಸಿಕೊಂಡರೆ ಸಾಕು ಎಂದು ಟ್ಯಾಂಕರ್ ಗಳ ಮೂಲಕ ತೋಟಗಳಿಗೆ ನೀರು ಹೊಡೆಸುತ್ತಿದ್ದಾರೆ.
40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಹಾಹಾಕಾರ: ತಾಲೂಕಿನ ಬಹುತೇಕ ಭಾಗದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗುತ್ತಿದ್ದು, ಸುಮಾರು 40 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹನಿ ನೀರಿಗು ಜನ ಪರದಾಡುವಂತಾಗಿದೆ, ದಿನಬಳಕೆ ನೀರಿಗಾಗಿ ಜನ ಗಂಟೆಗಟ್ಟಲೆ ಟ್ಯಾಂಕರ್ಗಳ ಮುಂದೆ ಕಾಯ್ದು ಕುಳಿತುಕೊಳ್ಳುವಂತಾಗಿದೆ, ಕೆಲ ಗ್ರಾಮಗಳಿಗೆ ತಾಲೂಕು ಆಡಳಿತ ಬೋರ್ ವೆಲ್ ಕೊರೆಸಿದ್ದು ಇನ್ನೂ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.
ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೆ ನೀರಿನ ಸಮಸ್ಯೆ ಉಲ್ಬಣ: ಚಿಕ್ಕನಾಯಕನ ಹಳ್ಳಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲವಾದರು ಸಹ ಕೆಲ ಬೋರ್ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ, ಹೊಸದಾಗಿ ಕೊರೆಸಿದ ಬೋರ್ವೆಲ್ಗಳಿಗೆ ಅಧಿಕಾರಿಗಳು ಮೋಟರ್ ಗಳನ್ನೇ ಬಿಡಿಸಿಲ್ಲ, ಪುರಸಭೆ ಅಧಿಕಾರಿಗಳು ನೀರಿನ ಬಳಕೆಯ ಬಗ್ಗೆ ಮುಂಜಾಗ್ರತ ಕ್ರಮ ಕೈಗೊಳ್ಳದಿದ್ದರೆ ಪಟ್ಟಣದಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ.
ಆರೋಗ್ಯ ಇಲಾಖೆ ಮೌನವಾಗಿದೆ: ವಿಪರಿತ ಬಿಸಿಲಿಗೆ ಜನ ತತ್ತರಿಸಿ ಹೋಗುತ್ತಿದ್ದು ಕೆಲವರಿಗೆ ಬಿಸಿಲಿನ ತಾಪಕ್ಕೆ ಆರೋಗ್ಯದಲ್ಲಿ ಏರುಪೇರಾಗುತ್ತಿದೆ, ಹೆಚ್ಚುತ್ತಿರುವ ಬಿಸಿಲಿನಲ್ಲಿ ಜನರು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಇದುವರೆಗೂ ಎಲ್ಲಿಯೂ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ, ಜನರ ಆರೋಗ್ಯ ಹಾಳಾದ ಮೇಲೆ ಚಿಕಿತ್ಸೆ ಕೊಡುವ ಬದಲು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ತಾಲೂಕಿನಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕಿದೆ.
Comments are closed.