ಕುಣಿಗಲ್: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆಗಾಗಿ ನಾಗರಿಕರು ಸೇರಿದಂತೆ ರೈತರು, ಗ್ರಾಮಸ್ಥರು ಮಳೆರಾಯನ ಪೂಜೆ, ಉತ್ಸವ ನಡೆಸುವ ಮೂಲಕ, ಉತ್ತಮ ಮಳೆ ಆಗಲೆಂದು ಹಗಲಿರುಳು ಪ್ರಾರ್ಥನೆ ಮಾಡುತ್ತಿದ್ದಾರೆ.
ತಾಲೂಕಿನ ಇತಿಹಾಸದಲ್ಲೆ ಕಂಡು ಕೇಳರಿಯದಂತೆ ಬಿಸಿಲಿನ ಬೇಗೆ 2024ರ ಮಾರ್ಚ್, ಏಪ್ರಿಲ್, ಮೇ ಮಾಹೆಯಲ್ಲಿ ಕಾಣ ಬರುತ್ತಿದೆ, ಬಿಸಲಿನ ಝಳಕ್ಕೆ ಗ್ರಾಮಾಂತರ ಪ್ರದೇಶದ ನೀರಿನ ಆಸರೆಯಾಗಿದ್ದ ಬೋರ್ ವೆಲ್ ಗಳಲ್ಲಿ ನೀರಿನ ಕೊರತೆ ಉಂಟಾಗಿ ರೈತರು ಇಟ್ಟಿರುವ ಬೆಳೆ ಸಂರಕ್ಷಣೆಗೆ ಪರದಾಡುವಂತಾಗಿದೆ, ಎರಡು ವರ್ಷದ ಕೆಳಗೆ ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಬಂದ ಮಳೆಯ ಅಬ್ಬರದಿಂದ ಸಂತಸಗೊಂಡ ರೈತರು ಇರುವ ನೀರಾವರಿ ಲಭ್ಯತೆ ಆಧಾರದ ಮೇಲೆಯೆ ಮುಂದಿನ ಭವಿಷ್ಯ ಯೋಚಿಸದೆ ಸುಮಾರು 80 ಲಕ್ಷಕ್ಕೂ ಹೆಚ್ಚು ಅಡಿಕೆ ಸಸಿ ನೆಟ್ಟಿದ್ದರು, ಅಡಿಕೆ ಸಸಿ ಸೂಕ್ಷ್ಮವಾಗಿರುವ ಕಾರಣ ಕಳೆದ ಕೆಲ ತಿಂಗಳಿನಿಂದ ಬೋರ್ ವೆಲ್ ನಲ್ಲಿ ನೀರು ಕಡಿಮೆಯಾದ ಕಾರಣ ಸಾಲಸೋಲ ಮಾಡಿ ನೆಟ್ಟ ಅಡಿಕೆ ಸಸಿ ಜಮೀನನಲ್ಲೆ ಬಾಡುವ ಸ್ಥಿತಿ ನಿರ್ಮಾಣವಾಗಿ ತುರ್ತಾಗಿ ಮಳೆಗಾಗಿ ರೈತರು ಪ್ರಾರ್ಥಿಸುವಂತಾಗಿದೆ.
ಬಿಸಲು ಝಲ ಹೆಚ್ಚಾದ ಹಿನ್ನೆಲೆಯಲ್ಲಿ ಸಹಜವಾಗಿ ಎಳ ನೀರಿಗೆ ಬೇಡಿಕೆ ಹೆಚ್ಚಾದ ಕಾರಣ ಎಳನೀರು ಸಗಟು ವ್ಯಾಪಾರಿಗಳು ರೈತರ ತೆಂಗಿನ ತೋಟಕ್ಕೆ ತೆರಳಿ ಅಲ್ಲಿಯೆ 28 ರಿಂದ 32 ರೂ. ದರ ನೀಡಿ ಎಳನೀರು ಕಟಾವು ಮಾಡುತ್ತಿದ್ದು, ಇದು ಮುಂದಿನ ದಿನಗಳಲ್ಲಿ ತೆಂಗಿನಕಾಯಿ ದರ ಏರಿಕೆಯ ಸೂಚನೆಯಾಗಿದೆ ಎನ್ನಲಾಗುತ್ತಿದೆ.
ಇನ್ನು ಬಿಸಲಿನ ಝಳದ ಅಬ್ಬರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಕಾರಣ ಮಕ್ಕಳು, ವೃದ್ಧರೂ ಬಿಸಿಲಿನ ಝಳ ತಾಳಲಾರದೆ ಮಳೆ ಬಂದು ಇಳೆತಂಪಾಗಲೆಂದು ಕನವರಿಸುತ್ತಿದ್ದಾರೆ, ತಾಲೂಕಿನ ಬಹುತೇಕ ಕಡೆಯ ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗಿದ್ದ ನೀರು ಗಣನೀಯವಾಗಿ ಬಿಸಲಿನ ಬೇಗೆಗೆ ಕಡಿಮೆಯಾಗುತ್ತಿದ್ದು, ಒಂದೆಡೆ ಆತಂಕ ಸೃಷ್ಟಿಸುತ್ತಿದೆ, ಕಳೆದ ವಾರ ಪಟ್ಟಣದಲ್ಲಿ ಅರ್ಧಗಂಟೆ ಮಳೆ ಬಂದಿದ್ದು ನಂತರ ಬಾರದ ಕಾರಣ ಬಿಸಿಲ ಬೇಗೆಗೆ ನಾಗರಿಕರು ಪರಿತಪಿಸುವಂತಾಗಿದೆ. ಶುಕ್ರವಾರ ತಾಲೂಕಿನ ಹುಲಿಯೂರು ದುರ್ಗದಲ್ಲಿ ಅಲ್ಪ ಪ್ರಮಾಣದ ಮಳೆ ಬಂದಿದ್ದು ಕೊಂಚ ನೆಮ್ಮದಿ ಮೂಡಿಸಿದ್ದರೆ ಬಂದ ಮಳೆ ಬೆಳೆ ರಕ್ಷಣೆಗೂ ಸಾಲದೆ ರೈತರು ಪುನಹ ಆಗಸದತ್ತ ಮುಖ ಮಾಡಿ ಕುಳಿತುಕೊಳ್ಳುವಂತಾಗಿದೆ.
ವಿವಿಧ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಿದ್ದರೆ, ಪಟ್ಟಣದಲ್ಲಿ ಬಜರಂಗದಳದ ಕಾರ್ಯಕರ್ತರು ವಿವಿಧ ವಾರ್ಡ್ಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಳೆರಾಯನ ಪೂಜೆ ಮಾಡಿದ್ದಾರೆ, ಕಳೆದ ಕೆಲ ಸಾಲಿನಲ್ಲಿ ಏಪ್ರಿಲ್ ಕೊನೆ ವಾರದಲ್ಲೆ ಮಳೆ ಆರಂಭವಾಗಿ ರೈತರ ನೆಮ್ಮದಿಗೆ ಕಾರಣವಾಗಿದ್ದರೆ ಈ ಬಾರಿ ಭರಣಿ ಮಳೆ ಆರಂಭವಾಗಿ ವಾರ ಕಳೆದರೂ ಇನ್ನು ಧರಣಿಗೆ ಭರಣಿ ಮಳೆ ಬಾರದ ಕಾರಣ ರೈತರ ಆತಂಕ ಹೆಚ್ಚಾಗಿದೆ, ಈ ಬಗ್ಗೆ ರೈತ ರವಿ, ಭರಣಿ ಮಳೆ ಬಂದು ಧರಣಿ ತಂಪಾಗಬೇಕೆಂದು ಹಿರಿಯರು ಹೇಳಿದ್ದರು, ಆದರೆ ಭರಣಿ ಮಳೆ ಆರಂಭವಾಗಿ ವರ ಕಳೆಯುತ್ತಾ ಬಂದರೂ ಇನ್ನು ಬಾರದಿರುವುದು ಕೃಷಿ ಚಟುವಟಿಕೆ ಮಾಡಲು ಶುಭ ಸೂಚನೆಯಲ್ಲ ಎಂದು ಆತಂಕ ವ್ಯಕ್ತ ಪಡಿಸಿದ್ದು, ರೈತ ಮಳೆರಾಯನೊಂದಿಗೆ ಸರಸ, ಸಲ್ಲಾಪ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಈ ವರ್ಷವೂ ಏನಾಗುವುದೋ ಕಾದು ನೋಡಬೇಕು ಎನ್ನುತ್ತಾರೆ.
ಒಟ್ಟಿನಲ್ಲಿ ತಾಲೂಕಿನಾದ್ಯಂತ ರೈತರು ಸೇರಿದಂತೆ ನಾಗರಿಕರು ಮಳೆರಾಯನ ಕೃಪೆಗೆ ಕಾದು ಕುಳಿತಿದ್ದು ಮಳೆರಾಯನ ಕೃಪೆ ಯಾವಾಗ ಆಗುವುದೋ ಎಂದು ಕಾದು ನೋಡಬೇಕಿದೆ.
Comments are closed.