ಕೊರಟಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಮನನೊಂದ ರೈತ ತಡರಾತ್ರಿ ತನ್ನ ಜಮೀನನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದ ರಾಜಣ್ಣ (38) ಮೃತ ವ್ಯಕ್ತಿಯಾಗಿದ್ದು, ತನ್ನ ಜಮೀನಿನಲ್ಲಿ ಬೋರ್ ವೆಲ್ ಕೊರೆಸಲು ಹಲವು ಫೈನಾನ್ಸ್ಗಳಲ್ಲಿ ಸುಮಾರು 12ಲಕ್ಷಕ್ಕೂ ಅಧಿಕ ಸಾಲ ಮಾಡಿ ಜಮೀನಿನಲ್ಲಿ 5ಕ್ಕೂ ಹೆಚ್ಚು ಕಡೆ ಬೋರ್ ವೆಲ್ ಕೊರೆಸಿದರೂ ನೀರು ಸಿಗದ ಕಾರಣ ಸಾಲ ತೀರಿಸಲಾಗದೆ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಮನನೊಂದು ಸಾಲ ತೀರಿಸಲು ಯಾವುದೇ ಮಾರ್ಗವಿಲ್ಲವೆಂದು ತಿಳಿದು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ಎರಡು ವರ್ಷದಿಂದ ಮಳೆ ಇಲ್ಲದೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿತ್ತು, ತನ್ನ ಮನೆಯ ಮೇಲು ಸಾಲ ಮಾಡಿ ತನ್ನ ಸ್ನೇಹಿತರ ಬಳಿಯೂ ಸಾಲ ಮಾಡಿದ್ದರು, ಸಾಲ ಪಡೆದ ರೈತನಿಗೆ ಫೈನಾನ್ಸ್ ಕಂಪನಿಗಳು ಸಾಲ ಕಟ್ಟುವಂತೆ ದಿನೇ ದಿನೇ ಕಿರುಕುಳ ನೀಡಿದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಸುರೇಶ್, ಪಿಎಸ್ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಸೂಲಿಗೆ ಬರುತ್ತಿರುವ ಫೈನಾನ್ಸ್ ಕಂಪನಿಗಳ ಕಾಟ ಜಾಸ್ತಿಯಾಗಿದೆ, ಮಳೆ ಕೈಕೊಟ್ಟು ರೈತರು ಫಸಲು ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ, ಸರ್ಕಾರ ಕೂಡಲೇ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಿ ರೈತರ ಸಮಸ್ಯೆ ಬಗೆಹರಿಸಿ ರೈತನನ್ನು ಸಂಕಷ್ಟದಿಂದ ದೂರ ಉಳಿಯುವಂತೆ ಮಾಡಬೇಕಿದೆ ಎಂದು ತಾಲ್ಲೂಕು ರೈತರ ಸಂಘದ ಅಧ್ಯಕ್ಷ ಸಿದ್ದರಾಜು ಒತ್ತಾಯಿಸಿದ್ದಾರೆ.
Comments are closed.