ಕುಣಿಗಲ್: ಪಟ್ಟಣದ ವಿವಿಧ ವಾರ್ಡ್ಗಳಿಗೆ ಹೊಂದಿಕೊಂಡಂತೆ ಇರುವ ಹೇಮಾವತಿ ನಾಲಾ ವಲಯದ ಸ್ವತ್ತಾದ ಕುಣಿಗಲ್ ದೊಡ್ಡಕೆರೆಯ ಲಕ್ಷ್ಮೀದೇವಿ ಹಂತದ ಕಾಲುವೆಗೆ ಪುರಸಭೆ ಚರಂಡಿ ನೀರು ಹರಿಸುತ್ತಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಜಾಣಮೌನದ ಬಗ್ಗೆ ಅಚ್ಚುಕಟ್ಟುದಾರರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಕುಣಿಗಲ್ ದೊಡ್ಡಕೆರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇದ್ದು, ದೊಡ್ಡಕೆರೆಯಿಂದ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಲಕ್ಷ್ಮೀದೇವಿಹಂತದ ಮುಖ್ಯ ಕಾಲುವೆಯು ಪಟ್ಟಣದ 1314,15,12,23 ವಾರ್ಡ್ ಪ್ರದೇಶದ ಚರಂಡಿ ನೀರು ನೇರವಾಗಿ ಲಕ್ಷ್ಮೀದೇವಿ ಹಂತದ ಕಾಲುವೆಗೆ ಸೇರ್ಪಡೆಯಾಗುತ್ತಿದೆ. ಪುರಸಭೆಯು ಚರಂಡಿ ನೀರನ್ನು ಅಚ್ಚುಕಟ್ಟುಪ್ರದೇಶಕ್ಕೆ ನೀರುಣಿಸುವ ಕಾಲುವೆಗೆ ಬಿಡದೆ ಬೇರೆ ವ್ಯವಸ್ಥೆ ಮಾಡಬೇಕಿದ್ದು, ಪುರಸಭೆಯ ಪರಿಸರ ಅಭಿಯಂತರ ಸೇರಿದಂತೆ ಇತರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೇರವಾಗಿ ಮುಖ್ಯ ಕಾಲುವೆಗೆ ಸೇರ್ಪಡೆಯಾಗುತ್ತಿದೆ, ಇದರಿಂದಾಗ ಫಲವತ್ತಾದ ಕೃಷಿ ಪ್ರದೇಶಕ್ಕೆ ಚರಂಡಿ ನೀರು ಪೂರೈಕೆಯಾಗಿ ಕೃಷಿಭೂಮಿಯಲ್ಲಿ ರಾಸಾಯನಿಕ ಸಾಂದ್ರತೆ ಹೆಚ್ಚಾಗುತ್ತಿದೆ ಎಂದು ಅಚ್ಚುಕಟ್ಟು ರೈತರಾದ ಶ್ರೀನಿವಾಸ್, ದಿನೇಶ್, ಕೃಷ್ಣಪ್ಪ ಆರೋಪಿಸುತ್ತಾರೆ.
ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಕೇವಲ ಅನುದಾನ ವೆಚ್ಚಕ್ಕೆ ಮಾತ್ರ ಸೀಮಿತವಾಗುವಂತೆ ಕಾಣುತ್ತಿದ್ದು ನಾಲೆ ಸ್ವಚ್ಛತೆ ಬಗ್ಗೆ ಗಮನ ಹರಿಸದ ಕಾರಣ ಇಂದು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಮುಖ್ಯಕಾಲುವೆಯು ಪಟ್ಟಣದ ವಿವಿಧ ವಾರ್ಡ್ಗಳ ಚರಂಡಿ ನೀರು ಹರಿಸುವ ತಾಣವಾಗಿದೆ, ಇದು ಜಲಮಾಲಿನ್ಯ ತಡೆ ಕಾಯಿದೆಯ ವಿವಿಧ ಅಂಶಗಳ ಉಲ್ಲಂಘನೆಯಾಗುವ ಜೊತೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಸಸ್ ಹೀರಾ ನಾಯಕ್ ಇತರರು ತೀರ್ಪಿನ ಅಂಶದ ಉಲ್ಲಂಘನೆ ಎಂದು ರೈತ ದಿನೇಶ್ ಹೇಳುತ್ತಾರೆ.
ಕೆರೆಯ ಮುಖ್ಯ ಕಾಲುವೆಗೆ ಚರಂಡಿ ನೀರು ಹರಿಸುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೆ, ಮಂಡಳಿಯವರು ಪುರಸಭೆ ಅಧಿಕಾರಿಗಳಿಗೆ ನೋಟೀಸ್ ನೀಡಿ ಸುಮ್ಮನಾಗುತ್ತಾರೆ, ಇನ್ನು ಮುಖ್ಯಕಾಲುವೆಯ ಉಸ್ತುವಾರಿ ನೋಡಿಕೊಳ್ಳುವ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೆ ಇಲ್ಲದಂತೆ ವರ್ತಿಸುವ ಮೂಲಕ ಜಾಣ ಕುರುಡು ಪ್ರದರ್ಶಿಸುವ ಕಾರಣ ಲಕ್ಷ್ಮೀದೇವಿಹಂತದ ಕಾಲುವೆಯ ಅಚ್ಚುಕಟ್ಟು ಪ್ರದೇಶದಲ್ಲಿ ಚರಂಡಿ ನೀರು ಹರಿದು ಇಡೀ ಪ್ರದೇಶವೂ ಕೆಟ್ಟವಾಸನೆಯ ಜೊತೆ ಸೊಳ್ಳೆ, ಇತರೆ ಕೀಟಗಳ ತಾಣವಾಗಿದೆ, ಇನ್ನಾದರೂ ಅಧಿಕಾರಿಗಳು ಹೇಮಾವತಿ ನಾಲಾ ವಲಯದ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಎಚ್ಚತ್ತು ಚರಂಡಿನೀರು ದೊಡ್ಡಕೆರೆಯ ಮುಖ್ಯನಾಲೆಯಾದ ಲಕ್ಷ್ಮೀದೇವಿ ಹಂತದ ಕಾಲುವೆಗೆ ಹರಿಯದಂತೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡು ಅಚ್ಚುಕಟ್ಟು ಪ್ರದೇಶದ ಭೂಮಿ, ಜಲ ಮಾಲಿನ್ಯ ಆಗುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Comments are closed.