ತುಮಕೂರು: ಎಲ್ಲಾ ಕ್ಷೇತ್ರದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಪೈಪೂಟಿ ಇದ್ದು, ಗುಣಮಟ್ಟದ ಚಿಕಿತ್ಸೆ ನೀಡಲು ವೈದ್ಯ ಸಮೂಹ ಮುಂದಾಗಬೇಕಿದೆ, ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳತ್ತ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ ಎಂದು ಗೃಹ ಸಚಿವ ಹಾಗೂ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿಸ್ತರಿಸಿಕೊಂಡಿರುವ ನೂತನ ಸ್ಪೆಷಾಲಿಟಿ ವಿಭಾಗದಲ್ಲಿ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನದ ಹೊರ ರೋಗಿಗಳ ಘಟಕ, ನವಜಾತ ಶಿಶುಗಳ ಎನ್ ಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯ ವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಅತ್ಯಾಧುನಿಕ ಚಿಕಿತ್ಸೆಗಳು ಹೆಚ್ಚಿನ ದರದಿಂದಾಗಿ ಜನಸಾಮಾನ್ಯರಿಗೆ ದೊರಕುತ್ತಿಲ್ಲ, ಈ ನಿಟ್ಟಿನಲ್ಲಿ ಸಿದ್ದಾರ್ಥ ಮೆಡಿಕಲ್ ಕಾಲೇಜು ಅತ್ಯಾಧುನಿಕ ಉಪಕರಣ ಅಳವಡಿಸಿ, ಅತಿ ಹಿಂದುಳಿದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಚಿಕಿತ್ಸೆ ದೊರೆಯಲಿ ಎಂಬ ಉದ್ದೇಶದಿಂದ ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳನ್ನು ತುಮಕೂರಿನಂತಹ ಪ್ರದೇಶದಲ್ಲಿ ಪರಿಚಯಿಸುತ್ತಿದ್ದೇವೆ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು.
ಆಸ್ಪತ್ರೆಗಳಲ್ಲಿ ವೈದ್ಯ ಸಮೂಹ ಕಾಲಮಿತಿ, ಬದ್ಧತೆ ಮತ್ತು ಶಿಸ್ತಿನಿಂದ ಕೆಲಸ ಮಾಡಿದಾಗ ರೋಗಿಗಳ ಸಮಸ್ಯೆಗಲಿಗೆ ಶೀಘ್ರ ಪರಿಹಾರ ಸಿಗಲಿದೆ, ಜೊತೆಗೆ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ
ವಿದ್ಯಾರ್ಥಿಗಳ ಉನ್ನತ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ, ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಪ್ರಕರಣ ಅಧ್ಯಯನ ಕುರಿತು ಲೇಖನ, ಸಂವಾದ ಮಾಡುವುದರ ಮೂಲಕ ಇನ್ನಷ್ಟು ಪ್ರಗತಿಯನ್ನು ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯ ಎಂದರು.
ಬೆಂಗಳೂರಿಗೆ ಸರಿ ಸಮನಾಗಿ ಸೌಲಭ್ಯ ಕಲ್ಪಿಸುವುದು ಸವಾಲಿನ ಕೆಲಸ, ಆದರೆ ಸಿದ್ದಾರ್ಥ ಆಸ್ಪತ್ರೆಯಲ್ಲಿ ಕ್ಯಾನ್ಸರ್, ಚರ್ಮ ರೋಗ, ನವಜಾತ ಶಿಶುಗಳ ವಿಭಾಗ, ಲೇಬರ್ ಹಾಗೂ ಸೌಂದರ್ಯ ವರ್ಧಕ ವಿಭಾಗದಲ್ಲಿ ಅತ್ಯಾಧುನಿಕ ಉಪಕರಣ ಒಳಗೊಂಡ, ನುರಿತ ವೈದ್ಯರ ತಂಡ ಕಾರ್ಯೋನ್ಮುಖವಾಗಿದೆ, ಎಲ್ಲಾ ಖಾಯಿಲೆಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ ನೀಡಲು ಆಸ್ಪತ್ರೆ ಸಜ್ಜಾಗಿದೆ, ಇದು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ವೈದ್ಯರ ಕೊರತೆ ಇದೆ, ತಜ್ಞ ವೈದ್ಯರ ಸೇವೆ ಸಿಗುತ್ತಿಲ್ಲ, ಈ ಪರಿಸ್ಥಿತಿ ಸುಧಾರಿಸಲು ವೈದ್ಯರಲ್ಲಿ ಸೇವಾ ಮನೋಭಾವ ಬರಬೇಕು, ಸರ್ಕಾರ ಕೂಡ ಕಳೆದ 10-15 ವರ್ಷದಿಂದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ, ಇನ್ನೂ ಸುಧಾರಣೆ ಆಗಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹೇ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಸಾಹೇ ವಿವಿಯ ಪರೀಕ್ಷಾ ನಿಯಂತ್ರಣಕ ಡಾ.ಗುರುಶಂಕರ್, ವೈದ್ಯಕೀಯ ಅಧೀಕ್ಷಕ ಡಾ.ಎನ್.ಎಸ್.ವೆಂಕಟೇಶ್, ಸಾಹೇ ವಿವಿಯ ಕುಲಾಪತಿ ಸಲಹೆ ಡಾ.ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ಎನ್. ಪ್ರಭಾಕರ್, ಸಿಇಓ ಕಿರಣ್ ಕುಮಾರ್, ಪ್ರಸೂತಿ ತಜ್ಞರಾದ ಡಾ.ಇಂದಿರಾ, ಚರ್ಮ ರೋಗ ತಜ್ಞರಾದ ಡಾ.ಶಿವಾನಂದ, ಡಾ.ಕಿರಣ್, ಡಾ.ಅರುಣ್, ಡಾ.ಪ್ರಸನ್ನ ಕುಮಾರ್ ಭಾಗವಹಿಸಿದ್ದರು.
Comments are closed.