ಪಟ್ಟನಾಯಕನ ಹಳ್ಳಿ: ಪಟ್ಟನಾಯಕನ ಹಳ್ಳಿ ಗ್ರಾಮದ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠ ಮತ್ತು ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಮಠ ಬಿಟ್ಟು ಕೊಡಲಿ, ಉಚ್ಛ ನ್ಯಾಯಾಲಯದ ಟಿಒಎಸ್ 1/2023 ದಾವೆಯಲ್ಲಿ ಶ್ರೀಗಳ ಮೇಲ್ಮನವಿ ವಜಾ ಗೊಳಿಸಿ ತೀರ್ಪು ನೀಡಿದೆ ಎಂಬ ಹೇಳಿಕೆ ಶುದ್ಧ ಸುಳ್ಳಿನಿಂದ ಕೂಡಿದೆ, ಹೈಕೋರ್ಟ್ ತೀರ್ಪಿನಲ್ಲಿ ನಂಜಾವಧೂತ ಸ್ವಾಮೀಜಿ ಮಠ ಬಿಟ್ಟುಕೊಡಬೇಕು ಎಂದು ಎಲ್ಲೂ ಹೇಳಿಲ್ಲ, ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಶ್ರೀಮಠದ ಪರ ವಕೀಲ ಲಕ್ಷ್ಮಿಕಾಂತ್ ಹೇಳಿದರು.
ಶಿರಾ ತಾಲೂಕಿನ ಪಟ್ಟನಾಯಕನ ಹಳ್ಳಿ ಗ್ರಾಮದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 18ನೇ ಶತಮಾನದಲ್ಲಿ ಸ್ಥಾಪನೆಯಾದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠ ದೇವಾಲಯವಲ್ಲ, ಗುಂಡ ಬ್ರಹ್ಮೇಶ್ವರ ಸ್ವಾಮಿ ಮಠ, ಅವಧೂತ ಪರಂಪರೆಯ ಮಠವಾಗಿದ್ದು,1ನೇ ನಂಜಾವಧೂತ ಸ್ವಾಮೀಜಿ ಹೊರತುಪಡಿಸಿ 1918ರಲ್ಲಿ ಶ್ರೀರಂಗವಧೂತರು ಪೀಠಾಧಿಪತಿ ಆಗುವ ಬಗ್ಗೆ ವಿಲ್ ಪರಂಪರೆ ಪ್ರಾರಂಭಿಸಿ ಗುರುಪರಂಪರೆ ಆರಂಭಿಸಿದ್ದಾರೆ, ಅದರ ಅನ್ವಯ ಶ್ರೀಗುರು ಕುಮಾರ್ ಅವಧೂತ ಸ್ವಾಮೀಜಿಗಳಿಂದ ವಿಲ್ ಪಡೆದು 7ನೇ ಪೀಠಾಧಿಪತಿಗಳಾಗಿ ಶ್ರೀನಂಜಾವಧೂತ ಸ್ವಾಮೀಜಿ ಶ್ರೀಮಠಕ್ಕೆ 7ನೇ ಪೀಠಾಧ್ಯಕ್ಷರಾಗಿ ಬಂದಿದ್ದಾರೆ.
11ನೇ ವಯಸ್ಸಿನಲ್ಲಿ ನಂಜಾವಧೂತ ಸ್ವಾಮೀಜಿ ಪೀಠಾಧ್ಯಕ್ಷರಾಗಿ ಶ್ರೀಮಠದ ಜವಾಬ್ದಾರಿ ಹೊತ್ತ ಮೇಲೆ ಸಾಕಷ್ಟು ಅಭಿವೃದ್ಧಿ ಕಂಡಿದ್ದು ರಾಜ್ಯಮಟ್ಟದಲ್ಲಿ ಶ್ರೀಮಠ ಖ್ಯಾತಿ ಗಳಿಸಲು ಸಾಧ್ಯವಾಗಿದ್ದು, ಸರ್ವ ಧರ್ಮದವರನ್ನು ಸಮಾನವಾಗಿ ಕಾಣುವಂತಹ ಪ್ರವೃತ್ತಿಯನ್ನು ಶ್ರೀಗಳು ಬೆಳೆಸಿಕೊಂಡಿದ್ದಾರೆ ಎಂದರು.
ದಾವೆ ಸಂಖ್ಯೆ 1/96 ರಲ್ಲಿ ಕೆಲವರು ಆಡಳಿತ ಅಧಿಕಾರಿ ನೇಮಿಸಿ, ಟ್ರ್ಟ್ ಮಾಡಿ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು, ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ 2016ರಲ್ಲಿ ಶ್ರೀಮಠದ ವಿರುದ್ಧ ಹಾಕಿದ್ದ ಅರ್ಜಿ ವಜಾ ಗೊಳಿಸಿತು, ಶ್ರೀಮಠಕ್ಕೆ 250 ಎಕರೆ ಜಮೀನು ನೀಡಿದ್ದೇವೆ ಎಂದು ಹೇಳುವವರ ಆರೋಪದಲ್ಲಿ ಹುರುಳಿಲ್ಲ, ಶ್ರೀಮಠದ ಒಟ್ಟು ಆಸ್ತಿ 236 ಎಕರೆ ದಾನ ನೀಡಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ, ಅದೇ ರೀತಿ ಶ್ರೀಗಳಿಗೆ ಪೀಠಾರೋಹಣ ಮಾಡುವ ಅಧಿಕಾರ ವಿಲ್ ಮೂಲಕ ಬಂದದ್ದು, ಸತ್ಯ ಅದನ್ನು ಸಾಬೀತಪಡಿಸಬೇಕೆಂದು ಯಾವ ನ್ಯಾಯಾಲವೂ ಹೇಳಿಲ್ಲ, ಉಚ್ಛ ನ್ಯಾಯಾಲಯದ ಟಿಒಎಸ್ 1/23 ಕೇಸ್ ನ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನ ವಿಭಾಗಿಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠ ಮತ್ತು ಸ್ವಾಮೀಜಿಗೆ ಪದೇ ಪದೇ ತೇಜೋವಧೆ ಮಾಡಲು ಕೆಲವರು ಹುನ್ನಾರ ಮಾಡುತ್ತಿದ್ದು ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಮುಖಂಡ ಎಸ್.ಆರ್.ಗೌಡ ಮಾತನಾಡಿ ನೀರಾವರಿ ಹೋರಾಟದ ಮೂಲಕ ಬಯಲು ಸೀಮೆಗೆ ಅಪ್ಪರ್ ಭದ್ರಾ ನೀರಾವರಿ ಯೋಜನೆ ಮೂಲಕ ನೀರು ಹರಿಸಲು ಪ್ರೇರಣೆಯಾಗಿರುವ ಶ್ರೀಗಳು ಸರ್ವ ಧರ್ಮದವರನ್ನು ಪ್ರೀತಿಸುವ ಗುಣ ಹೊಂದಿದ್ದಾರೆ, ಇಂತಹ ಶ್ರೀಗಳನ್ನು ಮಠ ಬಿಟ್ಟು ಕೊಡಬೇಕು ಎಂದು ಹೇಳುತ್ತಿರುವುದು ಸರಿಯಲ್ಲ, ನಂಜಾವಧೂತ ಸ್ವಾಮೀಜಿ ಪರ ಭಕ್ತ ಸಮೂಹ ಇದೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ರಾಮಕೃಷ್ಣ, ಒಕ್ಕಲಿಗರ ಜಾಗೃತಿ ವೇದಿಕೆ ಅಧ್ಯಕ್ಷ ವೀರ ಖ್ಯಾತರಾಯ, ನಗರಸಭೆ ಸದಸ್ಯ ರಾಮು, ಹಳ್ಳಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ. ಮಲ್ಲೇಶ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಿಡಗಟ್ಟೆ ಚಂದ್ರಶೇಖರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗುಂಡೆಗೌಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
Comments are closed.