2 ತಿಂಗಳು ರೈತರಿಂದ ಸಾಲ ವಸೂಲಾತಿ ಮಾಡಕೂಡದು

ಬ್ಯಾಂಕ್, ಮೈಕ್ರೋ ಫೈನಾನ್ಸ್ ಕಂಪನಿ, ಖಾಸಗಿ ಲೇವಾದೇವಿಗಾರರಿಗೆ ಸೂಚನೆ

51

Get real time updates directly on you device, subscribe now.


ತುಮಕೂರು: ಬರ ಪರಿಸ್ಥಿತಿಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳವರೆಗೂ ರೈತರಿಂದ ಸಾಲ ವಸೂಲಾತಿ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬ್ಯಾಂಕು, ಮೈಕ್ರೋ ಫೈನಾನ್ಸ್ ಕಂಪನಿ, ಖಾಸಗಿ ಲೇವಾದೇವಿಗಾರರು ಹಾಗೂ ಸಾಲದಾತರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತಾಗಿ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿ, ಮಳೆ ಬಾರದೆ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ, ಸಂಕಷ್ಟದಿಂದ ಹೊರಬರಲು ಮಾಡಿರುವ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ವರದಿಯಾಗುತ್ತಿವೆ, ಬೆಳೆಯಿಲ್ಲದೆ ಕಂಗೆಟ್ಟಿರುವ ಇಂತಹ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡಬೇಕೆಂದು ಯಾವುದೇ ಬ್ಯಾಂಕ್, ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು, ಸಾಲ ವಸೂಲಿಗಾಗಿ ರೈತರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

1,32,332ರ ರೈತರಿಗೆ ಬರ ಪರಿಹಾರ
ಜಿಲ್ಲೆಯಲ್ಲಿ ಬರ ಪರಿಹಾರವಾಗಿ ಮೊದಲ ಹಂತದಲ್ಲಿ 1,86,193 ರೈತರಿಗೆ 33.52 ಕೋಟಿ ರೂ. ವಿತರಿಸಲಾಗಿದೆ, ಎರಡನೇ ಹಂತದಲ್ಲಿ 1,32,332 ರೈತರಿಗೆ 74.21 ಕೋಟಿ ರೂ. ಬರ ಪರಿಹಾರ ನೀಡಲು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ, ಇನ್ನೆರಡು ದಿನಗಳಲ್ಲಿ 2ನೇ ಹಂತದ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಲಿದೆ, ಜಿಲ್ಲೆಯಲ್ಲಿ 39089 ಪ್ರಕರಣಗಳಲ್ಲಿ ರೈತರು ತಮ್ಮ ಆಧಾರ್ ನಂಬರ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಸದೇ ಇರುವುದರಿಂದ ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗಿರದ ಕಾರಣ ನೇರವಾಗಿ ರೈತರ ಖಾತೆಗೆ ಪರಿಹಾರ ಪಾವತಿಸಲು ಸಾಧ್ಯವಾಗಿರುವುದಿಲ್ಲ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿ ನ್ಯೂನ್ಯತೆ ಸರಿಪಡಿಪಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಲು ಸಂಬಂಧಿಸಿದ ಕಂದಾಯ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.

ಕಿರುಕುಳ ನೀಡಿದರೆ ಸಹಾಯವಾಣಿ 112ಕ್ಕೆ ಕರೆ ಮಾಡಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ ಕಳೆದ 3 ದಿನಗಳಲ್ಲಿ ಜಿಲ್ಲೆಯ ತಿಪಟೂರು ತಾಲೂಕಿನ ಮಹಿಳೆ ಹಾಗೂ ಕೊರಟಗೆರೆ ತಾಲೂಕಿನ ಒಬ್ಬ ರೈತ ಸೇರಿದಂತೆ ಇಬ್ಬರು ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ, ಯಾವುದೇ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಪಡೆದವರಿಂದ ವಸೂಲಾತಿಗಾಗಿ ಮನೆಗೆ ಭೇಟಿ ನೀಡಿ ಮಾನಸಿಕ ನಿಂದನೆ ಮಾಡಿದರೆ ಅಂಥವರ ವಿರುದ್ಧ ಎಫ್ ಐಆರ್ ದಾಖಲಿಸಲಾಗುವುದು, ಇಂಥ ಪ್ರಕರಣ ಕಂಡು ಬಂದರೆ ಕೂಡಲೇ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಪೊಲೀಸ್ ಅಧಿಕಾರಿಗಳು ನೆರವಿಗೆ ಬರುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಳೆದಾರು ತಿಂಗಳಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ 4 ಪ್ರಕರಣಗಳ ಮೇಲೆ ಎಫ್ ಐಆರ್ ದಾಖಲಾಗಿದೆ, ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಸಾಲದಾತರು ನೀಡಿದ ಸಾಲ ಮರುಪಾವತಿ ಮಾಡದಿರುವುದೇ ಈ ಆತ್ಮಹತ್ಯೆ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ, ತುಮಕೂರು ನಗರದಲ್ಲಿ ಮೀಟರ್ ಬಡ್ಡಿ ದಂಧೆ ಸೇರಿದಂತೆ ತಿಪಟೂರು, ಕೆ.ಬಿ.ಕ್ರಾಸ್, ಚಿಕ್ಕನಾಯಕನ ಹಳ್ಳಿಯಲ್ಲಿ ಫೈನಾನ್ಸ್ ಕಂಪನಿಗಳು ನೀಡಿರುವ ಸಾಲ ವಸೂಲಾತಿ ಮಾಡಲು ಸಾಲಗಾರರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಹೆಚ್ಚಿನ ಸಂಖ್ಯೆಯ ಪ್ರಕರಣ ವರದಿಯಾಗಿವೆ ಎಂದು ತಿಳಿಸಿದರಲ್ಲದೆ ಸಾಲ ಮಾಡಿ ತೀರಿಸಲಾಗದವರಿಗೆ ಮನೋಸ್ಥೈರ್ಯ ತುಂಬುವ ಕೆಲಸವಾಗಬೇಕು, ಸಾಲದಿಂದ ಮುಕ್ತಿ ಹೊಂದಲು ಆತ್ಮಹತ್ಯೆಯೊಂದೇ ಮಾರ್ಗವಲ್ಲ ಎಂಬ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!