ಕುಣಿಗಲ್: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವೈರಲ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಜಮಾವಣೆಗೊಂಡ ಜೆಡಿಎಸ್ ಕಾರ್ಯರ್ತರು ಪ್ರತಿಭಟನಾ ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಜಗದೀಶ್ ಮಾತನಾಡಿ, ಹಾಸನದಲ್ಲಿ ನಡೆದಿದೆ ಎನ್ನಲಾದ ಪೆನ್ ಡ್ರೈವ್ ವೈರಲ್ ಹಿಂದೆ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ, ಪೆನ್ ಡ್ರೈವ್ ವೈರಲ್ ಮಾಡುವ ಮೂಲಕ ವಿನಾಕಾರಣ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವರ್ಛಸ್ಸಿಗೆ ಧಕ್ಕೆ ತರುವಂತೆ ಕೆಲಸವನ್ನು ಡಿಸಿಎಂ ಮಾಡಿರುವುದು ಖಂಡನೀಯ, ಚುನಾವಣೆಯಲ್ಲಿ ನೇರ ರಾಜಕಾರಣ ಮಾಡಲಾಗದೆ ಹತಾಶರಾಗಿ ಇಂತಹ ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ, ಇವರ ಮನೆಯಲ್ಲೂ ಹೆಣ್ಣು ಮಕ್ಕಳಿಲ್ಲವೆ, ಅಶ್ಲೀಲ ವೀಡಿಯೋ ವೈರಲ್ ಮಾಡುವ ಮುನ್ನ ಹೆಣ್ಣುಮಕ್ಕಳ ಮುಖ ಏಕೆ ತೋರಿಸಬೇಕಿತ್ತು, ಇದು ಇವರು ರಾಜ್ಯದ ಹೆಣ್ಣುಮಕ್ಕಳಿಗೆ ಕೊಡುವ ಗೌರವ, ಇವರ ಕುಕೃತ್ಯಕ್ಕೆ ಶಿವರಾಮೇಗೌಡ ಎಂಬ ಕೀಳುಮಟ್ಟದ ಮನುಷ್ಯ ಬೆಂಬಲವಾಗಿ ನಿಂತಿದ್ದು ಆತನ ವ್ಯಕ್ತಿತ್ವ ಏನೆಂದು ತೋರಿಸುತ್ತದೆ, ದೇವೇಗೌಡರ ಕೃಪೆ ಇಲ್ಲದೆ ಇದ್ದಲ್ಲಿ ಆ ಮನುಷ್ಯ ಸಂಸದನಾಗುತ್ತಿರಲಿಲ್ಲ, ಇಂದು ಅವರ ಉಪ್ಪು ತಿಂದು ಅವರ ವಿರುದ್ಧವೆ ಕುತಂತ್ರ ನಡೆಸುವ ಕೆಳ ಮಟ್ಟಕ್ಕೆ ತಲುಪಿದ್ದಾನೆ, ಪ್ರಕರಣದ ತನಿಖೆಗೆ ಎಸ್ ಐಟಿ ನೇಮಿಸಿದ್ದು ಇದು ರಾಜ್ಯ ಸರ್ಕಾರದ ಅಡಿಯಲ್ಲೆ ಪ್ರಭಾವಿ ಸಚಿವರು ಹೇಳಿದಂತೆ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆಯಿಂದ ಸತ್ಯಾಂಶ ಹೊರುವುದು ಅನುಮಾನವಾಗಿದೆ, ಅಲ್ಲದೆ ಈ ಪ್ರಕರಣದಲ್ಲಿ ವಿನಾಕಾರಣ ವಿರೋಧ ಪಕ್ಷದವರನ್ನು ಮಣಿಸುವ ಕೃತ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ, ಸಂಸದ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಲ್ಲಿ ಈ ನೆಲದ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಲಿ, ಆದರೆ ಈ ತನಿಖೆಯನ್ನು ಸಿಬಿಐಗೆ ವಹಿಸುವ ಮೂಲಕ ವೈರಲ್ ಮಾಡಿ ಹೆಣ್ಣು ಮಕ್ಕಳ ಮಾನ ಕಳೆದವರ ಸತ್ಯಾಂಶ ಹೊರ ತರಬೇಕಿದೆ ಎಂದರು.
ಮುಖಂಡ ಬೆಂಕಿ ಮಹಾದೇವ್ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಆಗದೆ ಈ ಕುತಂತ್ರ ಮಾಡುತ್ತಿದ್ದಾರೆ, ಇದು ಇವರಿಗೆ ತಿರುಗು ಮುರುಗು ಆಗಲಿದೆ, ಎಸ್ ಐಟಿ ಎಂದರೆ ಶಿವಕುಮಾರ್ ಇನ್ವೇಸ್ಟಿಗೆಟಿಂಗ್ ಟೀಮ್, ಸಿದ್ದರಾಮಯ್ಯ ಇನ್ವೆಸ್ಟಿಗೇಟಿಂಗ್ ಟೀಮ್ ಅಗಿರುವುದರಿಂದ ಸತ್ಯಾಂಶ ರಾಜ್ಯದ ಜನತೆಗೆ ಸಿಗದು, ಆದ್ದರಿಂದ ಸಿಬಿಐಗೆ ವಹಿಸಬೇಕೆಂದರು.
ಮುಖಂಡ ಕೆ.ಎಲ್.ಹರೀಶ್, ವಕ್ತಾರ ಪ್ರಕಾಶ್, ಮಾತನಾಡಿದರು, ಪ್ರಮುಖರಾದ ರಂಗಸ್ವಾಮಿ, ನಿಖಿಲ್, ಶಿವಕುಮಾರ, ನಾಗರಾಜ, ವರದರಾಜು, ಕೃಷ್ಣ, ಸಿದ್ದಲಿಂಗಯ್ಯ, ಮಂಜುನಾಥ, ಗಂಗಯ್ಯ, ಬೆಟ್ಟಸ್ವಾಮಿ, ಕೃಷ್ಣ, ಕೇಶವ ಇತರರು ಇದ್ದರು.
Comments are closed.