ತುಮಕೂರು: ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು, ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಏಳನೇ ವೇತನ ಜಾರಿಗೆ, ಹಳೆ ಪೆನ್ಷನ್ ಪದ್ಧತಿ ಜಾರಿಗೆ ಹೋರಾಟ ಮಾಡುವುದೂ ಸೇರಿದಂತೆ ಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯರು, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಹೇಳಿದರು.
ಬುಧವಾರ ನಗರದ ವಿವಿಧ ಶಾಲಾ, ಕಾಲೇಜುಗಳಲ್ಲಿ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿ ಆತನಾಡಿ, 20 ವರ್ಷಗಳಿಂದ ತಾವು ಶಿಕ್ಷಕರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು, ಶಿಕ್ಷಕರಿಗೆ ದೊರೆಯಬೇಕಾದ ಸವಲತ್ತುಗಳನ್ನು ಸಮಯಾನುಸಾರ ಕೊಡಿಸುವ ಹಾಗೂ ಶಿಕ್ಷಕರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ, ಶಿಕ್ಷಕರು ಸ್ವಾಭಿಮಾನದಿಂದ ತಲೆ ಎತ್ತಿ ಗೌರವದಿಂದ ಬಾಳುವಂತಹ ವ್ಯವಸ್ಥೆ ನಿರ್ಮಾಣ ಮಾಡಿದ ವಿಶ್ವಾಸ ತಮಗಿದೆ, ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೆ, ಜಾತಿ, ಮತ ಭೇದವಿಲ್ಲದಂತೆ ಕೆಲಸ ಮಾಡಿದ್ದೇನೆ, ಈ ಬಾರಿಯೂ ತಮಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ನಾರಾಯಣ ಸ್ವಾಮಿ ಮನವಿ ಮಾಡಿದರು.
ನಗರದ ವಿಶ್ವ ವಿದ್ಯಾಲಯ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ವಿದ್ಯಾವಾಹಿನಿ, ಕಾಲೇಜು, ಶ್ರೀದೇವಿ ಶಿಕ್ಷಣ ಸಂಸ್ಥೆ, ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಕ್ಷಯ, ಅಶ್ವಿನಿ ಸಂಸ್ಥೆಗಳ ಶಾಲಾ ಕಾಲೇಜುಗಳಲ್ಲಿ ಶಿಕ್ಷಕ ಮತದಾರರನ್ನು ಭೇಟಿ ಮಾಡಿದ ನಾರಾಯಣ ಸ್ವಾಮಿ ತಮಗೆ ಮತ ನೀಡಿ ಮತ್ತೊಂದು ಅವಧಿಗೆ ಆಯ್ಕೆ ಮಾಡುವಂತೆ ಕೋರಿದರು.
ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಆಗ್ನೇಯ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಮೊದಲಾದವರು ಭಾಗವಹಿಸಿದ್ದರು.
Comments are closed.