ಹುಳಿಯಾರು: ಬರಗಾಲದ ಹಿನ್ನೆಲೆಯಲ್ಲಿ ರೈತರ ಜಾನುವಾರುಗಳಿಗೆ ಮೇವು ಒದಗಿಸುವ ಸಲುವಾಗಿ ಹುಳಿಯಾರು ಹೋಬಳಿಯ ಕಾರೇಹಳ್ಳಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಬಳಿ ತಾಲೂಕು ಆಡಳಿತದಿಂದ ಮೇವು ಬ್ಯಾಂಕ್ ಆರಂಭಿಸಲಾಗಿದೆ, ಯಾವುದೇ ಗೊಂದಲ, ವಿವಾದ ಇಲ್ಲದೆ ನಿರಾತಂಕವಾಗಿ ಮೇವು ಬ್ಯಾಂಕ್ ನಡೆಯುತ್ತಿದ್ದರೂ ಅಲ್ಲಿನ ಸಿಬ್ಬಂದಿಗೆ ಊಟವಿಲ್ಲದೆ ಉಪವಾಸದಲ್ಲಿ ಕೆಲಸ ನಿರ್ವಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ತಾಲೂಕು ಪಶುಪಾಲನ ಇಲಾಖೆ ರೈತರ ಜಾನುವಾರು ಸಂಖ್ಯೆ ಗುರುತಿಸಿ ಟೋಕನ್ ಕೊಟ್ಟು ಕಳುಹಿಸುತ್ತಿರುವುದರಿಂದ ನೂಕು ನುಗ್ಗಲು ಇಲ್ಲದೆ ಅನಾಯಾಸವಾಗಿ ರೈತರು ಮೇವು ಖರೀದಿಸಿ ಹಿಂದಿರುಗುತ್ತಿದ್ದಾರೆ, ಮೇವು ಲಭ್ಯತೆಗೆ ಅನುಗುಣವಾಗಿ ನಿತ್ಯ 150 ರಿಂದ 200 ರೈತರು ಬರುತ್ತಿದ್ದು ಇವರೆಲ್ಲರಿಗೂ ಯಾವುದೇ ಗೊಂದಲ ಇಲ್ಲದೆ, ತಾರತಮ್ಯ ಮಾಡದೆ ಮೇವು ವಿತರಿಸುವ ಮೂಲಕ ರೈತರ ಪ್ರಶಂಸೆಗೆ ಸಿಬ್ಬಂದಿ ಪಾತ್ರರಾಗುತ್ತಿದ್ದಾರೆ, ಆದರೆ ಬೆಳಗ್ಗೆಯಿಂದ ರಾತ್ರಿವರೆಗೂ ಹುಲ್ಲಿನ ಧೂಳಿನಲ್ಲಿ ದುಡಿಯುತ್ತಿರುವ ಈ ಸಿಬ್ಬಂದಿಯನ್ನು ತಾಲೂಕು ಆಡಳಿತ ಮರೆತಂತೆ ಕಾಣುತ್ತಿದೆ.
ಪಶು ಇಲಾಖೆಯಿಂದ ನೋಂದಣಿ ಕಾರ್ಡ್ ತರುವ ರೈತರಿಂದ ಕಾರ್ಡ್ ಪಡೆದು ಎಂಟ್ರಿ ಮಾಡಿಕೊಂಡು ಹಣ ಕಟ್ಟಿಸಿಕೊಂಡು ಮೇವಿನ ತೂಕ ಹಾಕಿ ರೈತರಿಗೆ ವಿತರಿಸುವ ವರೆಗೂ ನಿತ್ಯ ಕಂದಾಯ ಇಲಾಖೆ, ಪಶು ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿಯ ಹತ್ತನ್ನೆರಡು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇವರಿಗೆ ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಮತ್ಯಾವ ವ್ಯವಸ್ಥೆ ಸಹ ಮಾಡಿಲ್ಲ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಇಲ್ಲಿನ ಸಿಬ್ಬಂದಿ.
ಇಲ್ಲಿನ ಕೆಲ ಸಿಬ್ಬಂದಿ ಹೊರ ರಾಜ್ಯಗಳಿಂದ ಬರುವ ಮೇವನ್ನು ಸಂಜೆವರೆಗೆ ವಿತರಣೆ ಮಾಡಿ ಉಳಿದ ಮೇವು ಗೋಡನ್ನಿಗೆ ಹಾಕಿಸಿ ಸ್ಥಳ ಸ್ವಚ್ಛಗೊಳಿಸಿ ಹೋಗುವಷ್ಟರಲ್ಲಿ ರಾತ್ರಿ 8 ಆಗುತ್ತದೆ, ಮೇವು ಬ್ಯಾಂಕ್ ಇರುವ ಸ್ಥಳದಲ್ಲಿ ಯಾವುದೇ ತಿಂಡಿ ಹೋಟೆಲ್ ಗಳು ಇಲ್ಲದ ಕಾರಣ ಚಹಾ ಬಿಸ್ಕೇಟ್ ತಿಂದು ರಾತ್ರಿವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇವರು ಉಪವಾಸ ಇರುವುದನ್ನ ನೋಡಲಾರದೆ ಮಂಗಳವಾರ ಮಧ್ಯಾಹ್ನ ಊಟವನ್ನು ಇಲ್ಲಿನ ಸಿಬ್ಬಂದಿಯೇ ಹುಳಿಯಾರಿನಿಂದ ತರಿಸಿ ಕೊಟ್ಟಿದ್ದಾರೆ, ಉಳಿದಂತೆ ರಾತ್ರಿ 8 ರ ವರೆವಿಗೆ ಉಪವಾಸವಿದ್ದು ಕೆಲಸ ಮಾಡಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕೆಲಸ ಆರಂಭಿಸಿದವರು ಸಂಜೆ 3 ಆದರೂ ಬಿಡುವಿಲ್ಲದೆ ರೈತರಿಗೆ ಮೇವು ವಿತರಿಸುತ್ತಿದ್ದಾರೆ, ಇವರಿಗೆ ಆಗಾಗ ಚಹಾ ಬಿಸ್ಕೇಟು, ಮಜ್ಜಿಗೆ ಹಾಗೂ ಮಧ್ಯಾಹ್ನ ಊಟ ಕೊಟ್ಟರೆ ಒತ್ತಡದ ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿ ಸಿಗುವ ಜೊತೆಗೆ ದೈಹಿಕ ಚೈತನ್ಯ ಸಿಗುತ್ತದೆ, ಇನ್ನಾದರೂ ಈ ಸಿಬ್ಬಂದಿ ಅಗತ್ಯತೆಗಳ ಬಗ್ಗೆ ತಾಲೂಕು ಆಡಳಿತ ಕಾಳಜಿ ವಹಿಸುವುದೇ ಕಾದು ನೋಡಬೇಕಿದೆ.
Comments are closed.