ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕೌಶಲ್ಯ ಅಗತ್ಯ

48

Get real time updates directly on you device, subscribe now.


ತುಮಕೂರು: ವಿದ್ಯಾರ್ಥಿಗಳ ಭವಿಷ್ಯ ಬದಲಾಯಿಸುವ, ಉದ್ಯೋಗ ಶೀಲರನ್ನಾಗಿಸುವ ಕೌಶಲ್ಯ ಕಲಿಸಲು ಕರ್ನಾಟಕ ಕೌಶಲ್ಯಅಭಿವೃದ್ಧಿ ನಿಗಮ ಇದೀಗ ಕೌಶಲ್ಯ ಬೆಳವಣಿಗೆಯ ಉತ್ಕೃಷ್ಟ ಯೋಜನೆಯೊಂದಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಶೋಭಾ.ಜಿ. ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ತುಮಕೂರು ವಿವಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಲಿಕೆ ಜೊತೆಗೆ ಕೌಶಲ್ಯ ಎಂಬ ಕಾರ್ಯಕ್ರಮದಡಿ ಕೈಗಾರಿಕಾ ಆದ್ಯತೆ ಮತ್ತು ಉದ್ಯಮಶೀಲತಾ ತರಬೇತಿಯ ಕಾರ್ಯಕ್ರಮ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪದವಿ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.72 ರಷ್ಟು ಮಂದಿಗೆ ಉದ್ಯೋಗ ಸಿಗುತ್ತಿಲ್ಲ, ಉದ್ಯೋಗ ಬಯಸುವ ಕೌಶಲ್ಯ ಸ್ನಾತಕ ಪದವಿ ಮುಗಿಸಿರುವ ವಿದ್ಯಾರ್ಥಿಗಳಲ್ಲೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಕಾಲೇಜಿನಲ್ಲಿ ಸ್ನಾತಕ ಪದವಿಯ ಅಂತಿಮ ವರ್ಷದಲ್ಲಿರುವ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕೌಶಲ್ಯವರ್ಧಕ ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಕರ್ನಾಟಕಕೌಶಲ್ಯಅಭಿವೃದ್ಧಿ ನಿಗಮ ಯೋಜನೆ ರೂಪಿಸಿದ್ದು, ಆಫ್ ಲೈನ್ ಮೂಲಕ ತರಬೇತಿ ನೀಡಿ ಮೌಲ್ಯಮಾಪನ ಕಾರ್ಯವನ್ನು ಕರ್ನಾಟಕ ಕೌಶಲ್ಯಅಭಿವೃದ್ಧಿ ನಿಗಮ ಪೂರ್ಣಗೊಳಿಸಿ, ಅಂಕ ಮತ್ತು ಗ್ರೇಡ್ ಗಳನ್ನು ನೀಡಲಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮೊದಲು ಶಿಕ್ಷಕರ ಕೌಶಲ್ಯ ವೃದ್ಧಿಯಾಗಬೇಕು, ಸರ್ಕಾರಗಳು ಕಡಿಮೆ ವೆಚ್ಚದಲ್ಲಿ ಪರಿಚಯಿಸುವ ಕೌಶಲ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಕರ್ನಾಟಕ ಕೌಶಲ್ಯಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್.ಸಿ.ಆರ್. ಮಾತನಾಡಿ, ಪದವಿ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳ ಪೈಕಿ 100 ರಲ್ಲಿ 22 ಮಂದಿಗಷ್ಟೇ ವಿಶೇಷ ಕೌಶಲ್ಯಗಳಿರುತ್ತವೆ, ಅವರಿಗಷ್ಟೇ ಉದ್ಯೋಗ ಸಿಗುತ್ತಿದೆ ಎಂದು ತಿಳಿಸಿ ನೂತನ ಕೌಶಲ್ಯ ಯೋಜನೆಯ ಅಧ್ಯಯನ ಮಂಡಳಿ, ವಿಷಯ, ಪಠ್ಯಕ್ರಮದ ವಿವರಗಳನ್ನು ತಿಳಿಸಿಕೊಟ್ಟರು.

ಕೌಶಲ್ಯ ಯೋಜನೆಯ ತುಮಕೂರು ವಿವಿಯ ಸಂಯೋಜಕಿ ಡಾ.ಮಂಗಳಾ ಗೌರಿ.ಎಂ.ಮಾತನಾಡಿ, ಆರು ಕೌಶಲ್ಯ ಆಧಾರಿತ ವಿಷಯಗಳನ್ನು ಪರಿಚಯಿಸಲಾಗುತ್ತಿದೆ, ನಿಯಮಿತ ಪಠ್ಯ ಕ್ರಮದ ಜೊತೆಯಲ್ಲಿ ಒಂದು ವಿಷಯಕ್ಕೆ ಮೂರು ಕ್ರೆಡಿಟ್ ಗಳಂತೆ 100 ಅಂಕಗಳಿರಲಿದೆ, ಕೌಶಲ್ಯ ಯೋಜನೆ ಕಾರ್ಯ ರೂಪಕ್ಕೆ ತರಲು ರಾಜ್ಯದಲ್ಲಿ ಆಯ್ಕೆಯಾದ ಒಟ್ಟು ನಾಲ್ಕು ವಿವಿಗಳಲ್ಲಿ ನಮ್ಮದೂ ಒಂದಾಗಿರುವುದು ಸಂತಸ ಸುದ್ದಿ ಎಂದರು. ವಿವಿ ಹಣಕಾಸು ಅಧಿಕಾರಿ ಪ್ರೊ.ಪರಮಶಿವಯ್ಯ.ಪಿ. ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!