ಟಿ.ಹೆಚ್.ಆನಂದ್ ಸಿಂಗ್
ಕುಣಿಗಲ್: ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕಿನ ಅತ್ಯಂತ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ, ಗ್ರಾಮ ಕೇಂದ್ರಗಳಲ್ಲಿ ಕೆಫಿನ್ ಯುಕ್ತ ತಂಪು ಪಾನೀಯಕ್ಕೆ ವಯೋ ಭೇದವಿಲ್ಲದೆ ಜನರು ಮಾರು ಹೋಗುತ್ತಿದ್ದು ಬಳಕೆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಯುವ ಮುಖಂಡ ವಿನೋದ್ ಗೌಡ ಒತ್ತಾಯಿಸಿದ್ದಾರೆ.
ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕಿನ ಹೋಬಳಿವಾರು ಗ್ರಾಮ ಹಾಗೂ ಪ್ರಮುಖ ಊರುಗಳಲ್ಲಿ ವಿವಿಧ ಕಂಪನಿಗಳು ಅತ್ಯಾಕರ್ಷಕ ಬಾಟಲಿಗಳಲ್ಲಿ ಕೆಂಪು ಬಣ್ಣದ ಕೆಫಿನ್ ಹಾಗೂ ಇತರೆ ರಾಸಾಯನಿಕ ಯುಕ್ತ ತಂಪು ಪಾನೀಯ ಮಾರಾಟ ಮಾಡುತ್ತಿದ್ದಾರೆ, ಸದರಿ ಕೆಫಿನ್ ಯುಕ್ತ ತಂಪು ಪಾನೀಯದ ಬಾಟಲಿಯ ಮೇಲೆ ಕೆಫಿನ್ ಯುಕ್ತದ್ರಾವಣ ವಾಗಿದ್ದು ದಿನಕ್ಕೆ 500 ಮಿಲಿ ಗಿಂತ ಹೆಚ್ಚಿನ ಸೇವನೆ ಮಾಡದಂತೆ, ಮಕ್ಕಳು ಹಾಗೂ ಗರ್ಭಿಣಿಯರಿಗೆ ಈ ಪಾನೀಯ ಬಳಸದಂತೆ ಎಚ್ಚರಿಕೆಯ ಅಂಶಗಳನ್ನು ಬಾಟಲಿಯ ಮೇಲೆ ಉಲ್ಲೇಖಿಸಲಾಗಿದೆ, ಆದರೆ ಯುವಕ ಯುವತಿಯರು ಈ ಕೆಫಿನ್ ಯುಕ್ತ ತಂಪು ಪಾನೀಯವನ್ನು ಮನಬಂದಂತೆ ಬಳಸುತ್ತಿರುವ ಕಾರಣ ಹಲವು ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ, ಯುವಕ ಯುವತಿಯರು ಬಳಸುವುದನ್ನು ನೋಡಿ ಮಕ್ಕಳು ಸಹ ಕೆಫಿನ್ ಯುಕ್ತ ತಂಪು ಪಾನೀಯ ಬಳಕೆ ಮಾಡುತ್ತಿರುವುದು ಆತಂಕಕಾರಿಯಾಗಿದೆ, ಅಂಗಡಿಯವರು ತಮಗೆ ಲಾಭ ಬಂದರೆ ಸಾಕು ಎಂಬ ದೃಷ್ಟಿಯಿಂದ ವಯೋಮಾನ ಭೇದವಿಲ್ಲದೆ ಯಾರು ಕೇಳಿದರು ಕೆಫಿನ್ ಯುಕ್ತ ತಂಪು ಪಾನೀಯ ನೀಡುತ್ತಿದ್ದಾರೆ, ಇದು ಆತಂಕಕ್ಕೆ ಈಡು ಮಾಡುವ ವಿಷಯವಾಗಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಈ ಬಾಟಲಿಯ ಮೇಲಿರುವ ಆಂಗ್ಲ ಎಚ್ಚರಿಕೆಯ ಸಂದೇಶಗಳನ್ನು ಯಾರು ಗಮನಿಸದ ಕಾರಣ ನಿಷೇಧಿತ ವರ್ಗದವರು ಸಹ ಜಾಹೀರಾತು ಸೇರಿದಂತೆ ಬಾಟಲಿಯ ಆಕರ್ಷಣೆಗೆ ಒಳಗಾಗಿ ಸೇವಿಸುತ್ತಿದ್ದಾರೆ, ಆಹಾರ ಸುರಕ್ಷಿತ ಪರವಾನಗಿ ಪಡೆದು ಮಾರಕಯುಕ್ತ ಕೆಫಿನ್ ಹಾಗೂ ಇತರೆ ರಸಾಯನಿಕ ಅಂಶ ಹೊಂದಿರುವ ತಂಪು ಪಾನೀಯವನ್ನು ಎಚ್ಚರಿಕೆಯ ಫಲಕದೊಂದಿಗೆ ಮಾರಾಟ ಮಾಡುವ ಮೂಲಕ ಸದರಿ ತಂಪು ಪಾನೀಯ ಕಂಪನಿಗಳು ಯುವ ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ.
ಆಘಾತಕಾರಿ ವಿಷಯ ಎಂದರೆ ತಂಪು ಪಾನಿಯ ಪಟ್ಟಿಯಲ್ಲಿ ಬರುವ ಕೆಫೆನ್ ಯುಕ್ತ ತಂಪು ಪಾನೀಯಗಳು ಮುಕ್ತವಾಗಿ ಮಾರಾಟವಾಗುತ್ತಿರುವುದು ಇವುಗಳನ್ನು ನಿಯಂತ್ರಿಸುವುದು ಸಹ ಹಲವು ಇಲಾಖೆಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಯುವ ಮುಖಂಡ ವಿನೋದ್ ಗೌಡ ಆರೋಪಿಸುವಂತೆ, ತಂಪು ಪಾನೀಯ ಮಾರಾಟ ಮಾಡುವ ಕಂಪನಿಯವರು ಕೆಫಿನ್ ಯುಕ್ತ ಇತರೆ ರಾಸಾಯನಿಕ ಉಳ್ಳ ಪಾನೀಯ ಮಾರಾಟ ಮಾಡುವ ಬಾಟಲಿಗಳ ಮೇಲೆ ಕನ್ನಡದಲ್ಲಿ ಎಚ್ಚರಿಕೆ ಸಂದೇಶ ಹಾಕುವುದಿಲ್ಲ, ಆಂಗ್ಲ ಭಾಷೆಯಲ್ಲಿ ಹಾಕುವುದರಿಂದ ಸಾಕಷ್ಟು ಮಂದಿಗೆ ಇದರ ಅರಿವೇ ಇರುವುದಿಲ್ಲ, ಇನ್ನಾದರೂ ಈ ನಿಟ್ಟಿನಲ್ಲಿ ಯುವ ಜನತೆ ರಕ್ಷಿಸಲು ಸಂಬಂಧ ಪಟ್ಟ ಇಲಾಖೆಗಳು ಪರಿಣಾಮಕಾರಿ ಕ್ರಮಕ್ಕೆ ಮುಂದಾಗುವ ಮೂಲಕ ದೇಶದ ಯುವ ಜನ ಆರೋಗ್ಯ ರಕ್ಷಣೆ ಮಾಡಬೇಕೆಂದು ಒತಾಯಿಸಿದ್ದಾರೆ.
ಕೆಫೆನ್ ಬಳಕೆ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಗಣೇಶ್ ಬಾಬು ಪ್ರತಿಕ್ರಿಯಿಸಿ, ಕೆಫಿನ್ ಯುಕ್ತ ಪಾನೀಯಗಳನ್ನು ಬಳಕೆ ಮಾಡಲು ಪ್ರಾರಂಭಿಸಿದಲ್ಲಿ ಅದೊಂದು ಚಟವಾಗಿ ಮಾರ್ಪಾಡಾಗುವ ಸಾಧ್ಯತೆ ಇರುತ್ತದೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೆಫಿನ್ ಸೇವನೆ ಮಾಡುವುದರಿಂದ ಹಲವು ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ, ಪರೋಕ್ಷವಾಗಿ ದೇಹದ ಯಕೃತ್, ಜೀರ್ಣಾಂಗ ವ್ಯವಸ್ಥೆಗೂ ಧಕ್ಕೆಯಾಗುತ್ತದೆ ನಿದ್ರಾ ಹೀನತೆಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ಫಿಜಿಶಿಯನ್ ಡಾ.ನವೀನ್ ಮಾತನಾಡಿ, ಕೆಫಿನ್ ಯುಕ್ತ ಪಾನೀಯಗಳನ್ನು ನಿಗದಿತ ಪ್ರಮಾಣ ಮೀರಿ ಬಳಸಿದಾಗ ಹೃದಯದ ನಾಡಿಮಿಡಿತ ಏರುಪೇರು ಆಗುತ್ತದೆ, ಇದರಿಂದ ಹಲವು ಹೃದಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ, ಹಾಗಾಗಿ ಕೆಫಿನ್ ಯುಕ್ತ ತಂಪು ಪಾನೀಯ ಬಳಸುವಾಗ ಅಗತ್ಯ ಎಚ್ಚರ ವಹಿಸುವುದು ಸೂಕ್ತ ಎಂದು ಹೇಳಿದ್ದಾರೆ, ಒಟ್ಟಿನಲ್ಲಿ ನಿಗದಿತ ಪ್ರಮಾಣ ಮೀರಿ ಮನಬಂದಂತೆ ಬಳಕೆ ಆಗುತ್ತಿರುವ ಕೆಫಿನ್ ಯುಕ್ತ ತಂಪು ಪಾನೀಯಗಳ ನಿಯಂತ್ರಣಕ್ಕೆ ಯಾವ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡುವಂತಾಗಿದೆ.
Comments are closed.