ತುಮಕೂರು: ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಜಿಲ್ಲೆಯ ಚಿಕ್ಕನಾಯಕನ ಹಳ್ಳಿ, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ತಾಲ್ಲೂಕಿನ 17 ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಅನುಮೋದನೆ ನೀಡಲಾಯಿತು.
ಜಿಲ್ಲಾ ಪಂಚಾಯತಿ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಹೊಸ ಕೊಳವೆಬಾವಿಗಳಿಗೆ ಅನುಮೋದನೆ ನೀಡಲಾಯಿತು.
ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಬಡಕೆಗುಡ್ಲು, ಕಾರೇನಹಳ್ಳಿ, ಭೀಮಸಂದ್ರ, ರಾಯಪ್ಪನಹಟ್ಟಿ, ಕಂದಿಕೆರೆ, ಮಧುಗಿರಿ ತಾಲ್ಲೂಕಿನ ಮಲ್ಲನಾಯಕನ ಹಳ್ಳಿ, ಭಕ್ತರಹಳ್ಳಿ, ಪುಲಮಾಚಿ, ಕೊರಟಗೆರೆ ತಾಲ್ಲೂಕಿನ ತುಂಬಾಡಿ, ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದ 1ನೇ ಬ್ಲಾಕ್, ಶಿರಾ ತಾಲ್ಲೂಕಿನ ಹುಣಸೇಕಟ್ಟೆ, ತಾವರೇಕೆರೆ ಬೋವಿ ಕಾಲೋನಿ, ರಾಮನಹಳ್ಳಿ, ಗಜಮಾರನ ಹಳ್ಳಿ, ದೇವರಹಳ್ಳಿ, ಸೋರೆಕುಂಟೆ ಹಾಗೂ ಹುಯಿಲ್ ದೊರೆ ಸೇರಿ ಒಟ್ಟು 17 ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಅನುಮೋದನೆಗೂ ಮುನ್ನ ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಸ್ಥಿತಿ- ಗತಿ ಬಗ್ಗೆ ಜಿ.ಪ್ರಭು ಮಾಹಿತಿ ಪಡೆದರು, ನಂತರ 46.17 ಲಕ್ಷ ರೂ. ವೆಚ್ಚದಲ್ಲಿ 17 ಹೊಸ ಕೊಳವೆ ಬಾವಿ ಕೊರೆಸಲು ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಮಾತನಾಡಿ, ಹೊಸ ಕೊಳವೆ ಬಾವಿ ಕೊರೆಯುವ ಮುನ್ನ ನೀರಿನ ಮೂಲವಿರುವ ಕಡೆ ವೈಜ್ಞಾನಿಕವಾಗಿ ಜಲಬಿಂದು ಗುರುತಿಸಬೇಕು, ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿರುವ ಹಾಗೂ ಇಳುವರಿ ಕಡಿಮೆಯಾಗಿರುವ ಬಗ್ಗೆ ವರದಿಯಾದ ಜನವಸತಿಗಳಲ್ಲಿ ಮಾತ್ರ ಹೊಸ ಕೊಳವೆ ಬಾವಿಗಳಿಗೆ ಅನುಮೋದನೆ ನೀಡಲಾಗುವುದು. ಸಭೆಯಲ್ಲಿ ಅನುಮೋದಿಸಿರುವ ಹೊಸ ಕೊಳವೆ ಬಾವಿಗಳನ್ನು ಇನ್ನೆರಡು ದಿನದೊಳಗೆ ಕೊರೆಸಬೇಕು ಎಂದು ನಿರ್ದೇಶನ ನೀಡಿದರು.
ಈಗಾಗಲೇ ಹಲವಾರು ಕೊಳವೆ ಬಾವಿ ವಿಫಲವಾಗಿರುವ ಜನವಸತಿ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸುವುದು ಸೂಕ್ತವಲ್ಲವೆಂದು ಸಲಹೆ ನೀಡಿದರಲ್ಲದೆ ಹಿಂದಿನ ಸಭೆಯಲ್ಲಿ ಕುಡಿಯುವ ನೀರಿನ ಜಲಮೂಲಗಳ ಸ್ವಚ್ಛಗೊಳಿಸಿ ವರದಿ ನೀಡಲು ಸೂಚಿಸಲಾಗಿತ್ತು, ಜಲಮೂಲಗಳನ್ನು ಸ್ವಚ್ಛಗೊಳಿಸಿದ ಬಗ್ಗೆ ಕೂಡಲೇ ಪಿಡಿಓಗಳು ಕಾರ್ಯ ನಿರ್ವಾಹಕಾಧಿಕಾರಿಗಳ ಮೂಲಕ ದೃಢೀಕರಣ ಪತ್ರವನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕೆಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆದು ಪೂರೈಕೆ ಮಾಡಲು ಆದ್ಯತೆ ನೀಡಬೇಕು, ಖಾಸಗಿ ಕೊಳವೆ ಬಾವಿ ದೊರೆಯದಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಮುಂದಾಗಬೇಕು ಎಂದರಲ್ಲದೆ, ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ಗ್ರಾಮಗಳಿಗೆ ತುರ್ತು ಸಂದರ್ಭಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ದರ ನಿಗದಿಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡಲಾಗುವುದೆಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ರವೀಶ್, ವಿವಿಧ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಹಾಜರಿದ್ದರು.
Comments are closed.