ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯ

38

Get real time updates directly on you device, subscribe now.


ತುಮಕೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯುತ್ತಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನಿಯಮ ಗಾಳಿಗೆ ತೂರಿ ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ನಷ್ಟು ಉಂಟು ಮಾಡುತ್ತಿದ್ದು, ಜಿಲ್ಲಾಡಳಿತ ಕೂಡಲೇ ಸರಕಾರದ ನಿಯಮ ಪಾಲಿಸುವಂತೆ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ಸಂಯುಕ್ತ ಹೋರಾಟ- ಕರ್ನಾಟಕದ ಸಂಚಾಲಕ ಸಿ.ಯತಿರಾಜು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಣಮಟ್ಟದ ಕೊಬ್ಬರಿ ಖರೀದಿ ಹೆಸರಿನಲ್ಲಿ ರೈತರನ್ನು ಸಾಕಷ್ಟು ಶೋಷಣೆಗೆ ಒಳಪಡಿಸಲಾಗುತ್ತಿದೆ, 75 ಎಂಎಂ ಗಿಂತ ಕಡಿಮೆ ಇರುವ ಒಳ್ಳೆಯ ಗುಣಮಟ್ಟದ ಕೊಬ್ಬರಿ ಖರೀದಿಸುತ್ತಿಲ್ಲ, ಅಲ್ಲದೆ ಮಿಶ್ರ ಬೆಳೆ ಬೆಳೆದ ರೈತರು ತಂದ ಕೊಬ್ಬರಿ ಪಹಣಿಯಲ್ಲಿ ಬೆಳೆ ನಮೂದಾಗದ ರೈತರ ಕೊಬ್ಬರಿ ತಿರಸ್ಕರಿಸುವ ಮೂಲಕ ಬರದಿಂದ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತಿದ್ದಾರೆ ಎಂದರು.

ಸತತ ಬರದಿಂದ ಈಗಾಗಲೇ ರೈತರು ಸಾಕಷ್ಟು ಹೈರಾಣಾಗಿದ್ದಾರೆ, ಹೀಗಿರುವಾಗಲೇ ತೇವಾಂಶದ ಕೊರತೆಯಿಂದ ತೆಂಗಿನ ಹಳ್ಳುಗಳು ಉದುರಲಾರಂಭಿಸಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ, ಹಾಗಾಗಿ ಕೂಡಲೇ ಸರಕಾರ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು, ರಾಜಕೀಯ ರಹಿತವಾಗಿ ರೈತರ ಬೆಳೆಗಳಿಗೆ ಅದರಲ್ಲಿಯೂ ತೆಂಗು ಮತ್ತು ಅಡಿಕೆ ಬೆಳೆಗೆ ನೀರೊದಗಿಸಲು ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕೆಂಬುದು ಸಂಯುಕ್ತ ಹೋರಾಟ- ಕರ್ನಾಟಕದ ಒತ್ತಾಯವಾಗಿದೆ ಎಂದು ಸಿ.ಯತಿರಾಜ್ ನುಡಿದರು.

ಚಿಂತಕ ಕೆ.ದೊರೆರಾಜು ಮಾತನಾಡಿ, ಚುನಾವಣೆ ನಂತರ ಜಿಲ್ಲಾಡಳಿತ ಜನರ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸ ಬೇಕಾಗಿದೆ, ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ, ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ, ಕುಡಿಯುವ ನೀರಿನ ಯೋಜನೆಗಳ ಪ್ರಗತಿಯಲ್ಲಿದ್ದರೂ ಅದು ಅಂಚಿನ ಜನರಿಗೆ ತಲುಪುತ್ತಿಲ್ಲ, ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು, ಶಾಲಾ, ಕಾಲೇಜುಗಳು ಪುನರಾರಂಭವಾಗುವ ಕಾಲದಲ್ಲಿ ಶುಲ್ಕಗಳು ತೀವ್ರವಾಗಿ ಹೆಚ್ಚಿದ್ದು, ಖಾಸಗಿ ಶಾಲೆಗಳ ಈ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ನಾಗೇಶ್ ಮಾತನಾಡಿ, ನಾಫೇಡ್ ಖರೀದಿ ಕೇಂದ್ರದ ಮೂಲಕ ಕೊಂಡ ಕೊಬ್ಬರಿಗೆ ಮೂರು ದಿನದಲ್ಲಿ ರೈತನ ಖಾತೆಗೆ ಹಣ ವರ್ಗಾವಣೆ ಮಾಡಬೇಕು, ಜಿಲ್ಲೆಯಲ್ಲಿ ಏ. 01 ರಿಂದ ಕೊಬ್ಬರಿ ಖರೀದಿ ಆರಂಭವಾಗಿದ್ದು ಏ.13ರ ವರೆಗೆ ಮಾತ್ರ ಕೇಂದ್ರ ಸರಕಾರದ ಎಂ ಎಸ್ ಪಿ ಹಣ ಬಂದಿದೆ, ಆ ನಂತರದಿಂದ ಇದುವರೆಗೂ ಖರೀದಿಯಾದ ಕೊಬ್ಬರಿಗೆ ಹಣ ಬಂದಿಲ್ಲ, ರಾಜ್ಯ ಸರಕಾರ ಘೋಷಣೆ ಮಾಡಿದ್ದ 1500 ಪ್ರೋತ್ಸಾಹ ಧನ ಇದುವರೆಗೂ ಓಬ್ಬ ರೈತರಿಗೂ ಬಂದಿಲ್ಲ, ರಾಜ್ಯ ಸರಕಾರ ಕೊಬ್ಬರಿ ಖರೀದಿಯನ್ನು 2024ರ ಜೂನ್ 14ರ ವರೆಗೂ ವಿಸ್ತರಿಸಿದೆ, ಇದನ್ನು ಮುಂದಿನ 2 ತಿಂಗಳು ಮುಂದುವರೆಸಬೇಕೆಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್ ಮಾತನಾಡಿ, ನಾಫೆಡ್ ಖರೀದಿ ಕೇಂದ್ರದ ಅಧಿಕಾರಿಗಳು, ವರ್ತಕರು ಮತ್ತು ಜನ ಪ್ರತಿನಿಧಿಗಳು ಸೇರಿ ಸರಕಾರದ ಸವಲತ್ತು ಕೊಬ್ಬರಿ ಬೆಳೆಗಾರರಿಗೆ ತಲುಪದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ, ಹಮಾಲಿ ಚಾರ್ಚು, ಒಂದು ಕೆಜಿಗೆ 300 ಗ್ರಾಂ ಹೆಚ್ಚಿಗೆ ತೂಕ ಹೀಗೆ ಹಲವು ರೀತಿಯಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯರೈತ ಸಂಘದ ತಿಪಟೂರು ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ, ಎಐಟಿಯುಸಿ ಕಂಬೇಗೌಡ, ಸೈಯದ್ ಮುಜೀವ್, ರೈತ ಸಂಘದ ದೇವರಾಜು, ಚನ್ನಬಸಣ್ಣ, ಅಜ್ಜಪ್ಪ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!